ಕುಮಟಾ: ಇಲ್ಲಿಯ ಡಾ. ಹಳಕಾರ ಚಾರಿಟೇಬಲ್ ಮೆಡಿಕಲ್ ಅಸೋಸಿಯೇಶನ್ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸೆ, ಮಾಹಿತಿ ಹಾಗೂ ಔಷಧ ವಿತರಣೆ ಶಿಬಿರ ಮೂರೂರಿನ ಹಟ್ಟಿಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜರುಗಿತು.
ಶಿಬಿರವನ್ನು ಮೂರೂರು ಕಲ್ಲಬ್ಬೆ ಹವ್ಯಕ ವಲಯಾಧ್ಯಕ್ಷ ಸುಬ್ರಾಯ ಭಟ್ಟ ಉದ್ಘಾಟಿಸಿದರು. ಆನಂತರ ಅವರು ಮಾತನಾಡಿ, ನೆಮ್ಮದಿ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ಪ್ರಮುಖವಾದದ್ದು. ಆರೋಗ್ಯಕ್ಕೆ ಸಂಬಂಧಿಸಿ ಡಾ. ಹಳಕಾರ ಚಾರಿಟೇಬಲ್ ಟ್ರಸ್ಟ್ ಮಾಹಿತಿ ಹಾಗೂ ಆರೋಗ್ಯ ಶಿಬಿರವನ್ನು ಗ್ರಾಮೀಣ ಭಾಗದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಹಳಕಾರ ಚೆರಿಟೇಬಲ್ನ ಅಧ್ಯಕ್ಷ ಡಾ ಅಶೋಕ ಭಟ್ಟ ಹಳಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ತುಲಸೀದಾಸ ಭಟ್ಟ ಅವರು ಸ್ಥಾಪಿಸಿದ ಈ ಚೆರಿಟೇಬಲ್ 27 ವರ್ಷಗಳಿಂದ ನಿರಂತರ ಸೇವಾ ಕಾರ್ಯ ಮಾಡುತ್ತಾ ಬಂದಿದೆ ಎಂದರು.
ಶ್ಲಾಘನೀಯ: ಮುಖ್ಯ ಅತಿಥಿಗಳಾಗಿ ಹವ್ಯಕ ಚಂದಾವರ ವಲಯದ ಆರೋಗ್ಯ ಪ್ರಧಾನ ಡಾ. ಎಸ್.ವಿ. ಭಟ್ಟ ಮಾತನಾಡಿ, ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸದೃಢವಾಗಿರುವುದೇ ಆರೋಗ್ಯವಾಗಿದೆ. ಅಂತಹ ಆರೋಗ್ಯ ಮುಖ್ಯವಾಗಿದ್ದು ಅದನ್ನು ಕಾಪಾಡಿಕೊಳ್ಳಬೇಕು. ಅನೇಕ ವರ್ಷಗಳಿಂದ ಡಾ. ಹಳಕಾರ ಚೆರಿಟೇಬಲ್ ನಡೆಸುತ್ತಿರುವ ಸೇವಾ ಕಾರ್ಯವು ಶ್ಲಾಘನೀಯ ಎಂದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶಂಕರ ಗೌಡ, ತಾಪಂ ಸದಸ್ಯ ರಾಧಾಕೃಷ್ಣ ಗೌಡ, ಹವ್ಯಕ ವಲಯ ಆರೋಗ್ಯ ಪ್ರಧಾನ ಆರ್ಎನ್. ಹೆಗಡೆ, ಗ್ರಾಪಂ ಸದಸ್ಯ ತುಳಸು ಗೌಡ, ಶಾಲಾ ಮುಖ್ಯಾಧ್ಯಾಪಕಿ ಪರಮೇಶ್ವರಿ ಮುಕ್ರಿ ಮತ್ತಿತರರು ಉಪಸ್ಥಿತರಿದ್ದರು. ತಜ್ಞ ವ್ಯೆದ್ಯ ಡಾ. ಪ್ರಕಾಶ ಭಟ್ಟ 'ತಂಬಾಕು ಹಾಗೂ ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ' ಕುರಿತು, ಡಾ. ರಂಜನಾ ಹೆಗಡೆ 'ಪರಿಸರ ನೈರ್ಮಲ್ಯದ ಕುರಿತು' ಹಾಗೂ ಡಾ.ಡಿ.ಡಿ. ನಾಯಕ 'ಹಲ್ಲುಗಳ ರಕ್ಷಣೆ' ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿ ಅವರ ಆಶಯದಂತೆ ಸ್ಥಳೀಯ ನಾಗರಿಕರು ರಕ್ತದಾನ ಮಾಡಿದರು.
ವಿವಿಧ ತಜ್ಞ ವೈದ್ಯರುಗಳು ರೋಗಿಗಳ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಿದರು. ಉಚಿತವಾಗಿ ಸಕ್ಕರೆ ಕಾಯಿಲೆಯ ಪರೀಕ್ಷೆ ನಡೆಸಲಾಯಿತು ಮತ್ತು ಔಷಧ ವಿತರಿಸಲಾಯಿತು.