ಯಲ್ಲಾಪುರ: ಸಮಾಜವನ್ನು ಒಂದುಗೂಡಿಸುವ ಮಹತ್ಕಾರ್ಯ ದೇವಾಲಯದಿಂದ ಆಗುತ್ತದೆ. ಅಂತೆಯೇ ಪುಣ್ಯಕ್ಷೇತ್ರಗಳು ಮತ್ತು ಪವಿತ್ರ ನದಿ, ಸಂಗಮಗಳಿಂದಲೂ ಈ ಕಾರ್ಯ ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಅವರು ತಾಲೂಕಿನ ಕಳಚೆಯ ಶ್ರೀ ಲಕ್ಷ್ಮೀನರಸಿಂಹ ದೇವರ ಪುನರ್ ಪ್ರತಿಷ್ಠೆ ಹಾಗೂ ನೂತನ ಶಿಖರ ಪ್ರತಿಷ್ಠಾ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಕೋಟಿ ಕೋಟಿ ಸಂಖ್ಯೆಯಲ್ಲಿ ಭಕ್ತರು ಸೇರುವ ಪ್ರಯಾಗದಲ್ಲಿ ಆಗುವ ಅನುಭವ ಅವರ್ಣನೀಯ. ಮಠ-ಮಂದಿರಗಳು ಭಕ್ತರಿಗೆ ಹೊಸ ಶಕ್ತಿ, ಚೈತನ್ಯಗಳನ್ನು ನೀಡುತ್ತವೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರೀಪಾದ ಭಟ್ಟ ಉಪಾಧ್ಯ ಸಾಂದರ್ಭೋಚಿತವಾಗಿ ಮಾತನಾಡಿದರು. ಶಾರಾದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಜಿ. ಹೆಗಡೆ ಸ್ವಾಗತಿಸಿದರು. ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಸದಸ್ಯ ವೆಂಕಟರಮಣ ಬೆಳ್ಳಿ ನಿರ್ವಹಿಸಿದರು. ಗ್ರಾಪಂ ಸದಸ್ಯ ಗಜಾನನ ಗ. ಭಟ್ಟ ವಂದಿಸಿದರು. ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ಗೋಕರ್ಣದ ಹಿರಿಯ ವಿದ್ವಾಂಸ ಗಣಪತಿ ಭಟ್ಟ ಹಿರೇ ಮತ್ತು ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ ಟ್ರಸ್ಟ್ ಅಧ್ಯಕ್ಷ ನಾಗರಾಜ ಹೆಗಡೆ ಇವರಿಗೆ ಶ್ರೀಗಳು ಶಾಲು ಹೊದಿಸಿ, ಗೌರವಿಸಿದರು. ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.