ಕನ್ನಡಪ್ರಭ ವಾರ್ತೆ, ಕುಮಟಾ, ಫೆ. 21
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಮಟಾದಲ್ಲಿ ಹಮ್ಮಿಕೊಂಡ ಮೂರು ದಿನಗಳ ಕಾಲದ ರಾಜ್ಯ ಮಟ್ಟದ ಕೃಷಿಮೇಳ ಹತ್ತು ಹಲವು ವಿಶೇಷತೆಗಳೊಂದಿಗೆ ಜನಮನವನ್ನು ಸೂರೆಗೊಳ್ಳುತ್ತಿದೆ. ಉದ್ಘಾಟನೆ ದಿನವಾದ ಗುರುವಾರ 50ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ, ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ಪ್ರಾತ್ಯಕ್ಷಿಕೆಗಳು, ಭೋಜನಶಾಲೆ, ಪಾಕಶಾಲೆ, ಕೃಷಿ ಯಂತ್ರೋಪಕರಣಗಳು ಹೀಗೆ ಪ್ರತಿಯೊಂದೂ ಬೆರಗುಗೊಳಿಸುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಸ್ತು, ಅಚ್ಚುಕಟ್ಟಾದ ವ್ಯವಸ್ಥೆ ಕೃಷಿ ಮೇಳಕ್ಕೆ ಇನ್ನಷ್ಟು ಕಳೆತಂದುಕೊಟ್ಟಿದೆ.
ಆಕರ್ಷಕ ಮಳಿಗೆಗಳು: ಕೃಷಿ ಮೇಳದಲ್ಲಿ ಬಗೆ ಬಗೆಯ 550 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ. ಕೃಷಿ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಪಟ್ಟ 100 ಮಳಿಗೆಗಳಿವೆ. ಎರಡು ಬೃಹತ್ ನರ್ಸರಿಗಳಿವೆ. ತೆಂಗು, ಅಡಕೆ ಮರಗಳನ್ನು ಏರುವ ಯಂತ್ರ, ಗದ್ದೆ ಊಳುವ ಯಂತ್ರ, ಟ್ರ್ಯಾಕ್ಟರ್ಗಳು ಇಲ್ಲಿವೆ. ಸಭಾಮಂಟಪದ ಎದುರು ಗೋಕರ್ಣದ ತರಕಾರಿಯನ್ನೇ ಬಳಸಿ ರೂಪಿಸಿದ ಮಳಿಗೆ, ಕಬ್ಬನ್ನು ಬಳಸಿ ರೂಪಿಸಿದ ಮಳಿಗೆ, ಅಡಕೆಗಳಿಂದ ರೂಪಿಸಿದ ಬೃಹತ್ ಶಿವಲಿಂಗ, ಬತ್ತದ ತೆನೆಗಳಿಗೆ ನಿರ್ಮಿಸಿದ ಮಳಿಗೆಗಳು ಚಿತ್ತಾಕರ್ಷಕವಾಗಿವೆ. ಒಂದೆಡೆ ಕರಕುಶಲ ಕರ್ಮಿಗಳು ಬಿದಿರಿನಿಂದ ಬುಟ್ಟಿ ತಯಾರಿಸುತ್ತಿದ್ದಾರೆ. ಇನ್ನೊಂದೆಡೆ ಆಲೆಮನೆ ನಡೆಯುತ್ತಿದೆ. ತಾಜಾ ಕಬ್ಬಿನಹಾಲು ದೊರೆಯುತ್ತಿದೆ. ಮತ್ತೊಂದೆಡೆ ಅಕ್ಕಿಯನ್ನು ಮುಡೆ ಕಟ್ಟುವ ಪ್ರಾತ್ಯಕ್ಷಿಕೆ ನೋಡ ಸಿಗುತ್ತದೆ. ರೈತರಿಂದ ರೈತರಿಗಾಗಿ ರೈತ ಸಂತೆ, ಜಾನುವಾರು ಹಾಗೂ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ, ಪರಿಣತ ವಿಷಯ ತಜ್ಞರಿಂದ ವಿಚಾರಗೋಷ್ಠಿ, ಆಕರ್ಷಕ ಫಲ-ಪುಷ್ಪ ಪ್ರದರ್ಶನಗಳಿಂದ ಕೃಷಿಮೇಳ ಪರಿಪೂರ್ಣವಾಗಿ ಕಂಗೊಳಿಸುತ್ತಿದೆ.
30ಸಾವಿರ ಜನರಿಗೆ ಊಟ: ಕೃಷಿ ಮೇಳದ ಮೊದಲ ದಿನ ಸುಮಾರು 30 ಸಾವಿರ ಜನರು ಭೋಜನ ಮಾಡಿದ್ದಾರೆ. ಅನ್ನ, ಸಾಂಬಾರ್, ಸಾರು, ಪಾಯಸ, ಮಜ್ಜಿಗೆ ಊಟ ಮೆಚ್ಚುಗೆಗೆ ಪಾತ್ರವಾಗಿದೆ. 30ಕ್ಕೂ ಹೆಚ್ಚು ಕೌಂಟರ್ಗಳ ಮೂಲಕ ಊಟವನ್ನು ಅಚ್ಚುಕಟ್ಟಾಗಿ ವಿತರಿಸಲಾಗುತ್ತಿದೆ. ವಿಶಾಲವಾದ ಭೋಜನಶಾಲೆ ನಿರ್ಮಿಸಲಾಗಿದೆ. ಬೃಹತ್ ಪಾಕಶಾಲೆಯಲ್ಲಿ ನೂರಾರು ಜನರು ಅಡುಗೆ ಸಿದ್ಧಪಡಿಸುತ್ತಿದ್ದಾರೆ. ಕೃಷಿ ಮೇಳಕ್ಕೆ ಪ್ರತಿದಿನ 70 ಸಾವಿರ ಜನರು ಬಂದರೂ ಊಟದ ವ್ಯವಸ್ಥೆ ಕಲ್ಪಿಸಲು ನಾವು ಸಜ್ಜಾಗಿದ್ದೇವೆ ಎನ್ನುತ್ತಾರೆ ಗ್ರಾಮಾಭಿವೃದ್ಧಿ ಯೋಜನೆಯ ಬೂದಪ್ಪ ಗೌಡ.
ಅಭೂತಪೂರ್ವ ಮೆರವಣಿಗೆ: ಉದ್ಘಾಟನೆಗೆ ಮುನ್ನ ಶಾಂತಿಕಾ ಪರಮೇಶ್ವರಿ ದೇವಾಲಯದಿಂದ ವೇದಿಕೆಯ ತನಕ ನಡೆದ ಮೆರವಣಿಗೆಯಲ್ಲಿ ಸಾವಿರ ಸಾವಿರ ಜನರು ಪಾಲ್ಗೊಂಡಿದ್ದರು. ಯಕ್ಷಗಾನ, ಮುಖವಾಡಗಳು, ಕೃಷಿ ಕ್ಷೇತ್ರದ ಟ್ಟಾಬ್ಲೋಗಳು ಸೇರಿದಂತೆ 37 ಟ್ಯಾಬ್ಲೋಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಹರಿದು ಬಂದ ಹೊರೆಗಾಣಿಕೆ: ಕೃಷಿ ಮೇಳಕ್ಕೆ ಹೊರೆಗಾಣಿಕೆ ಹರಿದುಬರುತ್ತಲೇ ಇದೆ. ಬುಧವಾರ ಸಂಜೆಯ ತನಕ 180ಕ್ವಿಂಟಲ್ ಅಕ್ಕಿ ಬಂದಿದೆ. 85ಸಾವಿರ ತೆಂಗಿನಕಾಯಿಗಳನ್ನು ಕಾಣಿಕೆಯಾಗಿ ನೀಡಲಾಗಿದೆ. ಎಲ್ಲ ಬಗೆಯ ತರಕಾರಿ, ಅಡಕೆ, ವೀಳ್ಯದೆಲೆ, ಹಲಸಿನಕಾಯಿ, ಮಾವಿನಕಾಯಿ, ಬಾಳೆಹಣ್ಣು, ಬಾಳೆ ಎಲೆ, ಬಗೆ ಬಗೆಯ ಹಣ್ಣುಗಳು ಹೀಗೆ ಹೊರೆಗಾಣಿಕೆ ಬರುತ್ತಲೇ ಇದೆ. ಭಕ್ತರು, ಸ್ವಯಂಸೇವಕರು, ದಾನಿಗಳು ಕೊಡುಗೆಯಾಗಿ ನೀಡುತ್ತಿದ್ದಾರೆ. ಕೃಷಿ ಮೇಳದಿಂದಾಗಿ ಇಡಿ ಕುಮಟಾ ಪಟ್ಟಣದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ನಾಡಿನ ವಿವಿಧೆಡೆಯಿಂದ, ಹಳ್ಳಿಹಳ್ಳಿಗಳಿಂದ ಕೃಷಿಕರು, ಜನತೆ ಕೃಷಿಮೇಳಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದ ಕೃಷಿಕರ ಕಣ್ಣು ಕುಮಟಾದತ್ತ ಹೊರಳುವಂತಾಗಿದೆ.
ಕೃಷಿ ಮೇಳದಲ್ಲಿ ಇಂದು
ಕುಮಟಾ ಕೃಷಿ ಸಂಶೋಧನಾ ಕೇಂದ್ರ ಮೈದಾನದಲ್ಲಿ ಬೆಳಗ್ಗೆ 9.30ರಿಂದ ಬೀದಿ ನಾಟಕ ಮಾಡಿದ್ದುಣ್ಣೋ ಮಹರಾಯ, 10ಗಂಟೆಯಿಂದ ಮಹಿಳಾ ವಿಚಾರಗೋಷ್ಠಿ-ಸ್ವಾವಲಂಬಿ ಹೆಣ್ಣು, ಕುಟುಂಬದ ಕಣ್ಣು. ಬೆಳಗ್ಗೆ 10ಕ್ಕೆ ಜಾನುವಾರು ಪ್ರದರ್ಶನ ಉದ್ಘಾಟನೆ, 12ಕ್ಕೆ ಮತ್ಸ್ಯೋದ್ಯಮ ಕೃಷಿ ಕುರಿತು ವಿಚಾರಗೋಷ್ಠಿ, ಮಧ್ಯಾಹ್ನ 1.30ರಿಂದ ಸುಸ್ಥಿರ ಕೃಷಿ ಮತ್ತು ಲಾಭದಾಯಕ ಹೈನುಗಾರಿಕೆ ಕುರಿತು ವಿಚಾರಗೋಷ್ಠಿ, ಮಧ್ಯಾಹ್ನ 3ಗಂಟೆಯಿಂದ ನಮ್ಮ ಹಳ್ಳಿ, ನಮ್ಮ ಕೃಷಿ, ನಮ್ಮ ಬದುಕು ಕುರಿತು ವಿಚಾರಗೋಷ್ಠಿ, ಸಂಜೆ 4ಗಂಟೆಯಿಂದ ಸರ್ಕಾರಿ ಇಲಾಖೆಗಳು ಮತ್ತು ರೈತಪರ ಯೋಜನೆಗಳ ಬಗ್ಗೆ ವಿಚಾರಗೋಷ್ಠಿ, ಸಂಜೆ 6ಗಂಟೆಯಿಂದ 7.30ರ ತನಕ ಸ್ಥಳೀಯ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ, ರಾತ್ರಿ 7.30ರಿಂದ
-ವಸಂತಕುಮಾರ್ ಕತಗಾಲ