ಗೋಕರ್ಣ: ನುಡಿದಂತೆ ನಡೆಯುವವರು ಬಹಳ ವಿರಳ. ಆದರೆ ಅದಕ್ಕೆ ಅಪವಾದವೆಂಬಂತೆ ಗೋಕರ್ಣ ಯುಥ್ ಆರ್ಗನೈಜೇಶನ್ ಯುವಕರು ತಾವು ನುಡಿದಂತೆ ನಡೆಯುವವರು ಎಂದು ತೋರಿಸಿಕೊಟ್ಟಿದ್ದಾರೆ. ಕಾರ್ಯಕ್ರಮಗಳು ಇನ್ನಿತರ ತಮ್ಮ ಕೆಲಸವಾದ ಮೇಲೆ ತಮಗೇನು ಸಂಬಂಧವಿಲ್ಲದಂತೆ ಕೈತೊಳೆದುಕೊಳ್ಳುವವರು ನದಿ ದಾಟಿದ ಮೇಲೆ ಅಂಬಿಗರ ಹಂಗೇಕೆ ಎಂಬಂತೆ ಹೆಚ್ಚಿರುವ ಈ ಕಾಲದಲ್ಲಿ ಗೋಕರ್ಣದ ಈ ಸಂಘಟನೆಯ ಕಾರ್ಯ ನಿಜವಾಗಿಯೂ ಪ್ರಶಂಸನೀಯವೇ ಸರಿ. 3 ದಿನಗಳ ಕಾಲ ಅದ್ಧೂರಿಯಾಗಿ ಗೋಕರ್ಣೋತ್ಸವ ಆಚರಿಸಿದ ಸಂಘಟನೆಯು ಅಷ್ಟಕ್ಕೆ ಮೈಮರೆಯದೇ ಆ ಸಂದರ್ಭದಲ್ಲಿ ಮುಖ್ಯ ಸಾಗರ ತೀರದಲ್ಲಿ ಉಂಟಾದ ತ್ಯಾಜ್ಯ ವಸ್ತುಗಳನ್ನು ಕೂಡಿ ಹಾಕಿ ಪ್ಲಾಸ್ಟಿಕ್ ಇನ್ನಿತರ ಘನ ತ್ಯಾಜ್ಯ ವಸ್ತಗಳನ್ನು ಸುಡುವುದರೊಂದಿಗೆ ತಮ್ಮ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಸಂಘಟನೆಯು ಕ್ಲೀನ್ ಮತ್ತು ಗ್ರೀನ್ ಗೋಕರ್ಣ ವಾಕ್ಯಕ್ಕೆ ಅರ್ಥ ತುಂಬಿತು. ಗೋಕರ್ಣ ಯುಥ್ ಆರ್ಗನೈಜೇಶನ್ ಅಧ್ಯಕ್ಷ ರಾಜಗೋಪಾಲ ಅಡಿ ನೇತೃತ್ವದಲ್ಲಿ ಈ ಸ್ವಚ್ಛತಾ ಕಾರ್ಯ ನೆರವೇರಿತು. ಈ ಸಂದರ್ಭದಲ್ಲಿ ಯುಥ್ ಆರ್ಗನೈಜೇಶನ್ ಉಪಾಧ್ಯಕ್ಷ ಸೂರಜ್ ಭಟ್ಟ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಶೇಟ್, ಕಾರ್ಯದರ್ಶಿಗಳಾದ ಸತೀಶ ನಾಯ್ಕ, ಸಾಗರ ನಾಯ್ಕ, ತೇಜಸ್ವಿ ನಾಯ್ಕ, ಗೌತಮ, ಗಣಪತಿ ಗೌಡ, ಶ್ರೀಧರ ಗೌಡ, ರವಿ ಆಚಾರಿ, ಗ್ರಾಪಂ ಸದಸ್ಯ ಗಜಾನನ ಶೆಟ್ಟಿ, ಪದಾಧಿಕಾರಿಗಳಾದ ವೆಂಕಟ್ರಮಣ ಗೌಡ, ನಾಗರಾಜ ಗೌಡ, ವೆಂಕಟೇಶ ಗೌಡ, ಮಂಜುನಾಥ ತಾಂಡೇಲ, ಕೃಷ್ಣಾನಂದ ನಾಯ್ಕ, ಮಂಜುನಾಥ ನಾಯಕ, ಸುರೇಶ ಗೋಕರ್ಣ, ನಾಗರಾಜ ನಾಯ್ಕ ಮತ್ತಿತರರು ಇದ್ದರು.