ಭಟ್ಕಳ: ಪುರಸಭೆಯ ಎಲ್ಲ 23 ವಾರ್ಡ್ಗಳಲ್ಲಿಯೂ ಜಾತ್ಯತೀತ ಜೆಡಿಎಸ್ನ ಕಾರ್ಯಕರ್ತರು ನಿಲ್ಲುವ ಉಮೇದುವಾರಿಕೆಯನ್ನು ತೋರಿಸಿದರೂ ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರು ಪಕ್ಷದ ಹಿತವನ್ನು ಗಾಳಿಗೆ ತೂರಿ ಇತರ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷವನ್ನು ಸಂಪೂರ್ಣ ಅವನತಿಯತ್ತ ಕೊಂಡೊಯ್ದಿದ್ದಾರೆಂದು ಜಾತ್ಯತೀತ ಜನತಾ ದಳದ ಹಿರಿಯ ಮುಖಂಡ, ಮಾಜಿ ಪುರಸಭೆ ಸದಸ್ಯ ಸೈಯದ್ ಹಸನ್ ಬರ್ಮಾವರ ಆರೋಪಿಸಿದ್ದಾರೆ.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ನಿಂದ ನಿಲ್ಲುವ ಕಾರ್ಯಕರ್ತರಿಗೆ ತಂಜೀಮ ಸಹ ಬೆಂಬಲ ಸೂಚಿಸಿದ್ದರು. ಪಕ್ಷದ ಕಾರ್ಯಕರ್ತ ನಾಗರಾಜ ಉಗ್ರಾಮಣಿಮನೆ ಜೆಡಿಎಸ್ನಿಂದ ಟಿಕೆಟ್ ನೀಡಬೇಕೆಂದು ಸ್ಥಳೀಯ ಕಾರ್ಯಕರ್ತರು ಪಕ್ಷದ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರಿಗೆ ವಿನಂತಿಸಿಕೊಂಡರೂ, ಅವರಿಗೆ ಟಿಕೆಟ್ ನೀಡದಿರುವುದರಿಂದ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡರು. ಕ್ಷೇತ್ರದಲ್ಲಿರುವ ನೂರಾರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷ ಬಿಟ್ಟು ಹೋಗುವಂತಾಗಿದೆ. ಇದೇ ರೀತಿ 11 ಮತ್ತು 23ನೇ ವಾರ್ಡುಗಳಲ್ಲಿ ಸಹ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಪ್ರೋತ್ಸಾಹ ನೀಡದಿರುವುದರಿಂದ ಅವರೆಲ್ಲರೂ ಪಕ್ಷ ತೊರೆಯುವಂತಾಗಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಇನಾಯತಲ್ಲಾ ಶಾಬಂದ್ರಿಯವರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಕೇವಲ ಎಂಎಲ್ಎ ಟಿಕೆಟ್ಗಾಗಿ ಪ್ರಯತ್ನಿಸುವುದು ಬಿಟ್ಟರೆ ಪಕ್ಷ ಬೆಳೆಸುವ ಕೆಲಸ ಮಾಡುತ್ತಿಲ್ಲ. ಇಂತಹ ಅಧ್ಯಕ್ಷರಿಂದ ಪಕ್ಷದ ಬಲವರ್ಧನೆಗೆ ತೊಡಕಾಗಿದೆ. ಇವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕೆಂದು ಬರ್ಮಾವರ ಆಗ್ರಹಿಸಿದರು.
ಪಕ್ಷದ ಕಾರ್ಯಾಧ್ಯಕ್ಷ ನ್ಯಾಯವಾದಿ ಸಂತೋಷ ನಾಯ್ಕ, ಮಾರುಕೇರಿ ಗ್ರಾಪಂ ಅಧ್ಯಕ್ಷ ಎಂ.ಡಿ. ನಾಯ್ಕ, ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ವೆಂಕಟೇಶ ನಾಯ್ಕ ತಲಗೋಡು, ಸಂಘಟನಾ ಕಾರ್ಯದರ್ಶಿ ಕೃಷ್ಣ ಹಳ್ಳೇರ, ಜೆಡಿಎಸ್ ಎಸ್ಸಿಎಸ್ಟಿ ಮೋರ್ಚಾ ಅಧ್ಯಕ್ಷರಾದ ಮಂಜು ಗೊಂಡ, ನಾಗರಾಜ ನಾಯ್ಕ, ಮಂಜುನಾಥ ನಾಯ್ಕ ಇದ್ದರು.