ಕನ್ನಡಪ್ರಭ ವಾರ್ತೆ, ಮುಂಡಗೋಡ, ಆ. 4
ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆ ಮತ್ತಷ್ಟು ಚುರುಕುಗೊಂಡಿವೆ. ಬತ್ತ ಬಿತ್ತನೆ ಸಂದರ್ಭದಲ್ಲಿ ಉತ್ತಮವಾಗಿ ಸುರಿದಿದ್ದ ಮಳೆ ಬಳಿಕ ಕೈಕೊಟ್ಟಿತ್ತು. ಇದರಿಂದ ಬತ್ತ ನೀರಿಲ್ಲದೆ ಒಣಗಲಾರಂಭಿಸಿತ್ತು. ಅಲ್ಲದೆ ಬೆಂಕಿ ರೋಗ, ಕೀಟ ಬಾದೆ ಸೇರಿದಂತೆ ಬೆಳೆ ಹಾನಿಗೊಳಗಾಗುವ ಆತಂಕ ಎದುರಾಗಿತ್ತು. ಈ ಹಂತದಲ್ಲಿ ಸುರಿಯಲಾರಂಭಿಸಿದ ಮಳೆ ರೈತರ ಸಂಕಷ್ಟವನ್ನು ದೂರ ಮಾಡಿದೆ. ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ರೈತ ಸಮುದಾಯ ಹರ್ಷಗೊಂಡಿದೆ.
ಬತ್ತ ಪ್ರಧಾನ ಪ್ರದೇಶವಾಗಿರುವ ಮುಂಡಗೋಡ ತಾಲೂಕಿನಲ್ಲಿ ಶೇ. 80ರಷ್ಟು ಭೂಮಿಯಲ್ಲಿ ಬತ್ತವನ್ನೇ ಬೆಳೆಯಲಾಗುತ್ತದೆ. ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಯಿಸಿ ವ್ಯವಸಾಯ ಮಾಡುವುದು ಅನಿವಾರ್ಯ.
ಶೇ 90ರಷ್ಟು ಬಿತ್ತನೆ: ತಾಲೂಕಿನಲ್ಲಿ ಸುಮಾರು 13600 ಹೆಕ್ಟೇರ್ ಅಂದರೆ 34 ಸಾವಿರ ಎಕರೆ ಬಿತ್ತನೆ ಪ್ರದೇಶವಿದ್ದು, ಈಗಾಗಲೇ 31822 ಎಕರೆ ಭೂಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಶೇ. 90ಕ್ಕೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಂತಾಗಿದೆ. ಇದರಲ್ಲಿ 23150 ಎಕರೆ ಪ್ರದೇಶದಲ್ಲಿ ಬತ್ತ ಬಿತ್ತನೆಯಾಗಿದ್ದು, 6375 ಎಕರೆ ಪ್ರದೇಶದಲ್ಲಿ ಗೋವಿನ ಜೋಳ, 362 ಎಕರೆಯಲ್ಲಿ ಕಬ್ಬು ಹಾಗೂ 1741 ಎಕರೆಯಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಇನ್ನು ಕೆಲವೇ ಕೆಲ ಭೂಪ್ರದೇಶದಲ್ಲಿ ನಾಟಿ ಬತ್ತ ಬಿತ್ತನೆಯಾದರೆ ಶೇ. 100ರಷ್ಟು ಬಿತ್ತನೆಯಾದಂತಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಗದ್ದೆಗಳೀಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಬತ್ತದ ಬೆಳೆಗಳಿಗೆ ಉತ್ತಮ ವಾತಾವರಣವಿದೆ. ಗದ್ದೆಗಳಲ್ಲಿ ಕಳೆ(ಕಸ) ಪ್ರಮಾಣ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿಯೂ ಪ್ರಕೃತಿ ರೈತನ ಕೈಹಿಡಿದರೆ ಉತ್ತಮ ಬೆಳೆ ನಿರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಮಳೆ ಪ್ರಮಾಣ ಕಡಿಮೆ
ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜುಲೈ ತಿಂಗಳಲ್ಲಿ ಹೆಚ್ಚು ಮಳೆಯಾದರೂ, ಮಳೆಯ ಪ್ರಮಾಣ ಕಡಿಮೆ. ಆಗಸ್ಟ್ 4ರ ವರೆಗೆ 671.5 ಮಿಮೀ ಮಳೆಯಾಗಿದ್ದು, ಕಳೆದ ಸಾಲಿನಲ್ಲಿ ಈ ವರೆಗೆ 794.9 ಮಿಮೀ ಮಳೆಯಾಗಿತ್ತು. ಕಳೆದ ಬಾರಿಗಿಂತ 123.4 ಮಿಮೀ ನಷ್ಟು ಮಳೆ ಕಡಿಮೆಯಾದಂತಾಗಿದೆ.
ಕೆರೆ, ಜಲಾಶಯ ಖಾಲಿ
ಜಲಾಶಯ ಹಾಗೂ ಕೆರೆಗಳಿಗೆ ನಿರೀಕ್ಷೆಯಂತೆ ನೀರು ಬಂದಿಲ್ಲ. ಕಳೆದ ಬಾರಿ ಕೂಡ ಮಳೆ ಕಡಿಮೆಯಾಗಿದ್ದರಿಂದ ತಾಲೂಕಿನ ಯಾವುದೇ ಜಲಾಶಯ, ಕೆರೆಗಳು ತುಂಬದೆ ಬೇಸಿಗೆಯಲ್ಲಿ ಜನ ಸಾಕಷ್ಟು ನೀರಿನ ಸಮಸ್ಯೆ ಎದುರಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಕೂಡ ಇದುವರೆಗೂ ಯಾವುದೆ ಕೆರೆಗಳಿಗೆ ನೀರು ಹರಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಬೇಕಿದೆ. ಇಲ್ಲದಿದ್ದಲ್ಲಿ ತೀವ್ರ ಸಮಸ್ಯೆ ಎದುರಿಸಬೇಕಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
-ಸಂತೋಷ ದೈವಜ್ಞ