ಹಳಿಯಾಳ: ಕರ್ನಾಟಕದ ಶಾಸಕನಾಗಿ ಕನ್ನಡ ವಿರೋಧಿ ಕೆಲಸ ಮಾಡುತ್ತಿರುವ ಶಾಸಕ ಸಂಭಾಜಿ ಪಾಟೀಲ ಅವರನ್ನು ಗಡಿಪಾರು ಮಾಡಬೇಕು ಹಾಗೂ ಕನ್ನಡ ನಾಡಿಗೆ ದ್ರೋಹ ಮಾಡುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಜಯಕರ್ನಾಟಕ ಸಂಘಟನೆ ಹಳಿಯಾಳ ತಾಲೂಕು ಕೇಂದ್ರ ಘಟಕ ಆಗ್ರಹಿಸಿದೆ. ಸೋಮವಾರ ಹಳಿಯಾಳದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಶಾಸಕ ಸಂಭಾಜಿ ಪಾಟೀಲ ಶವ ಯಾತ್ರೆಯೊಂದಿಗೆ ಮೆರವಣಿಗೆ ನಡೆಸಿ, ಶಿವಾಜಿ ವೃತ್ತದಲ್ಲಿ ಪ್ರತಿಕೃತಿ ದಹನ ಮಾಡಿ ರಸ್ತೆ ತಡೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿದ ಸಂಘಟಕರು ಮುಖ್ಯಮಂತ್ರಿಗೆ ಬರೆದ ಮನವಿ ಸಲ್ಲಿಸಿದರು. ಜಯಕರ್ನಾಟಕ ಸಂಘಟನೆ ಹಳಿಯಾಳ ತಾಲೂಕು ಯುವ ಘಟಕದ ಅಧ್ಯಕ್ಷ ವಿಲಾಸ ಕಣಗಲಿ, ಪದಾಧಿಕಾರಿಗಳಾದ ಶಿರಾಜ ಮುನವಳ್ಳಿ, ಮಹೇಶ ಹುಲಕೊಪ್ಪ, ಟೆಂಪೋ ಮಾಲೀಕ-ಚಾಲಕರ ಸಂಘದವರು, ಜೈಭೀಮ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.