ಹೊನ್ನಾವರ: ಮೂವರು ಹಾಡು ಹಗಲೇ ಮನೆಯ ಬಾಗಿಲ ಬೀಗ ಮುರಿದು ಹಣ ಮತ್ತು ಆಭರಣ ಕದ್ದು ಪರಾರಿಯಾಗುತ್ತಿರುವಾಗ ಮನೆ ಮಾಲೀಕ ಬೆನ್ನಟ್ಟಿದ ಪರಿಣಾಮ ಒಬ್ಬ ಸಿಕ್ಕಿಬಿದ್ದ ಘಟನೆ ಹೊನ್ನಾವರ ಪಟ್ಟಣದ ಶಾಂತಿನಗರದ ಬಾಂದೇಹಳ್ಳ ಬಳಿ ಸಂಭವಿಸಿದೆ.
ಕಳ್ಳನನ್ನು ಬೆನ್ನಟ್ಟಿ ಹಿಡಿಯುವ ಭರದಲ್ಲಿ ಮನೆ ಮಾಲೀಕ ಪ್ರಕಾಶ ಡಿಸೋಜಾ ಕಳ್ಳನಿಂದ ಹಲ್ಲೆಗೊಳಗಾಗಿದ್ದಾರೆ. ಇಲ್ಲಿನ ಶಾಂತಿನಗರದಲ್ಲಿ ವಾಸವಾಗಿದ್ದು, ದಂಪತಿ ಕೆಲಸದ ನಿಮಿತ್ತ ಹೊರ ಹೋಗಿದ್ದೆವು. ಎಂದಿನಂತೆ ಮನೆಗೆ ಬೀಗ ಹಾಕಿ ತೆರಳಿದ್ದೆವು. ಮಧ್ಯಾಹ್ನ 1.30ರ ವೇಳೆ ನಾನು ಊಟಕ್ಕಾಗಿ ಮನೆಗೆ ಬಂದು ನೋಡಿದಾಗ ಮನೆ ಮುಂಬಾಗಿಲ ಚಿಲಕ ಮುರಿದಿತ್ತು. ಅನುಮಾನಗೊಂಡು ವಾಹನ ನಿಲ್ಲಿಸಿ ಒಳಹೋಗುತ್ತಿದ್ದಂತೆ ಮನೆಯೊಳಗಿದ್ದ ಮೂವರು ಹಿಂಬಾಗಿಲು ತೆರೆದು ಮನೆಯ ಹಿಂಬದಿಯ ಹೊಳೆಗೆ ಧುಮುಕಿದರು.
ಅವರನ್ನು ಹಿಡಿಯಲು ಹಿಂದೆ ಮುಂದೆ ನೋಡದೇ ನಾನೂ ಅವರೊಂದಿಗೇ ಹಳ್ಳಕ್ಕೆ ಧುಮುಕಿದೆ. ಒಬ್ಬ ತನ್ನ ಕೈಲಿದ್ದ ರಾಡ್ನಿಂದ ನನ್ನ ಕಾಲಿಗೆ ಬಲವಾಗಿ ಹೊಡೆದ. ನೋವಿನಲ್ಲೂ ಆತನನ್ನು ಬಿಡಲಿಲ್ಲ. ನನ್ನ ಕೂಗಿಗೆ ಸುತ್ತಮುತ್ತಲಿನ ಜನ ಸೇರಿ ಒಬ್ಬನ್ನು ಹಿಡಿಯಲು ನೆರವಾದರು. ಇನ್ನಿಬ್ಬರು ಹೊಳೆಯಲ್ಲಿ ತಪ್ಪಿಸಿಕೊಂಡು ಪರಾರಿಯಾದರು. ಮನೆಯೊಳಗಿದ್ದ ರು. 35 ಸಾವಿರ ನಗದು ಮತ್ತು 5 ತೊಲೆ ಬಂಗಾರದ ಮಾಂಗಲ್ಯ ಸರ ಆರೋಪಿತರ ಪಾಲಾಗಿದೆ ಎಂದು ಪ್ರಕಾಶ ಡಿಸೋಜಾ ವಿವರಿಸಿದರು. ಪ್ರಕಾಶ್ ಡಿಸೋಜಾ ಚಿಕಿತ್ಸೆ ಪಡೆಯುತ್ತಿದ್ದು, ಸೆರೆಸಿಕ್ಕ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಸುಮಾರು 26ರ ಪ್ರಾಯದ ಸೆರೆಸಿಕ್ಕ ಆರೋಪಿಯ ಕೈ ಮೇಲಿದ್ದ ಹಚ್ಚೆಯ ಮೇಲೆ ಸಂಜು ಎಂದು ತಿಳಿದುಬಂದಿದ್ದು, ಇವರು ಹುಬ್ಬಳ್ಳಿ ಕಡೆಯವರೆಂದು ಶಂಕಿಸಲಾಗಿದೆ. ಪೊಲೀಸರು ಇನ್ನಿಬ್ಬರಿಗಾಗಿ ತನಿಖೆ ನಡೆಸಿದ್ದಾರೆ.
ಲೋಕಾ ಬಲೆಗೆ ಇಡಗುಂದಿ ಗ್ರಾಪಂ ಕಾರ್ಯದರ್ಶಿ
ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಆಗೇರ ಸೋಮವಾರ ಸಂಜೆ ಪಪಂ ಕಾರ್ಯಾಲಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೊಡ್ಲಗದ್ದೆಯ ಮಂಜುನಾಥ ಭಟ್ಟ ಎಂಬ ವ್ಯಕ್ತಿ ಗ್ರಾಪಂ ವ್ಯಾಪ್ತಿಯ ಕೆಲ ಕಾಮಗಾರಿಗಳನ್ನು ಮಾಡಲಾಗುತ್ತಿದ್ದರೆನ್ನಲಾಗಿದ್ದು, ಅವರಿಂದ ಪರ್ಸಂಟೇಜ್ ಪಡೆಯುತ್ತಿದ್ದಾಗ ಕಾರವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಡಿ. ಸಿದ್ದೇಶ್ವರ, ಡಿವೈಎಸ್ಪಿ ನಾಗೇಶ ಶೆಟ್ಟಿ, ಇನ್ಸಪೆಕ್ಟರ್ ಕಿರಣಕುಮಾರ ಹಾಗೂ ಸಿಬ್ಬಂದಿ ಈ ದಾಳಿಯ ನೇತೃತ್ವ ವಹಿಸಿದ್ದರು. ಕೊಡ್ಲಗದ್ದೆಯ ಮಂಜುನಾಥ ನಾರಾಯಣ ಭಟ್ಟ ಲೋಕಾಯುಕ್ತರಿಗೆ ದೂರು ನೀಡಿದ್ದರು.