ಹೊನ್ನಾವರ: ಮಳೆ-ಗಾಳಿಯಲ್ಲೇ ತನ್ನ ಗೆಳತಿಯ ಮನೆಗೆ ಒಂದೂವರೆ ವರ್ಷದ ಮಗುವನ್ನೆತ್ತಿಕೊಂಡು ಹೊರಟಿದ್ದ ತಾಯಿ ಗಾಳಿಗೆ ಸಿಕ್ಕು ಕೈಜಾರಿದ ಛತ್ರಿ ಹಿಡಿದು ಪಕ್ಕದ ನೆಲ ಬಾವಿಗೆ ಬಿದ್ದಿದ್ದರಿಂದ ಮಗು ಮೃತಪಟ್ಟ ಘಟನೆ ತಾಲೂಕಿನ ಗೇರುಸೊಪ್ಪಾ ಕಬ್ಬಿನಗದ್ದೆಯಲ್ಲಿ ಮಂಗಳವಾರ ಸಂಭವಿಸಿದೆ. ಒಂದುವರೆ ವರ್ಷದ ಮಗು ಭಾಗ್ಯಶ್ರೀ ನಾಗರಾಜ ನಾಯ್ಕ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ನತದೃಷ್ಟೆ. ಗಂಡ ಕೂಲಿ ಕೆಲಸಕ್ಕೆ ಹೋದ ಮೇಲೆ ಲಕ್ಷ್ಮೀ ನಾಯ್ಕ ತನ್ನ ಗೆಳತಿ ಮನೆಗೆ ಹೊರಟಿದ್ದಳು. ಕಾಲು ದಾರಿಯಲ್ಲಿ ಮಗುವನ್ನೆತ್ತಿಕೊಂಡು ಸಾಗುತ್ತಿದ್ದಾಗ ಗಾಳಿ-ಮಳೆ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಮಗು ಸ್ಥಳದಲ್ಲೇ ಅಸುನೀಗಿದೆ. ಸುತ್ತಲಿನ ನಿವಾಸಿಗಳು ಬಂದು ತಾಯಿ-ಮಗುವನ್ನು ಮೇಲೆತ್ತಿದ್ದಾರೆ. ಲಕ್ಷ್ಮೀ ನಾಯ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದಾಳೆ. ಪ್ರಕರಣ ದಾಖಲಾಗಿದೆ.