ಹೊಸಪೇಟೆ: ಬಳ್ಳಾರಿ ಜಿಪಂ, ಹೊಸಪೇಟೆ ತಾಪಂ ಸಂಯುಕ್ತಾಶ್ರಯದಲ್ಲಿ ನಿರ್ಮಲ ಭಾರತ ಅಭಿಯಾನ ಹೋಬಳಿ ಮಟ್ಟದ ತರಬೇತಿ ಕಾರ್ಯಕ್ರಮವು ನಗರದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜಿನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಆ. 7ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ನಿರ್ಮಲ ಭಾರತ ಅಭಿಯಾನ ತರಬೇತಿ ಕಾರ್ಯಕ್ರಮವನ್ನು ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಸಲಾವುದ್ದೀನ್ ಉದ್ಘಾಟಿಸುವರು. ಮರಿಯಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾನ್ ಸಾಹೇಬ್ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಾದ ಕೆ. ಶಿವರಾಮೆಗೌಡ, ಪಿ.ಟಿ. ನಂದೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ, ಜಿಪಂ ಯೋಜನಾ ನಿರ್ದೇಶಕ ರವಿಕುಮಾರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ. ಎ. ಚನ್ನಪ್ಪ, ಜಿಪಂ, ತಾಲೂಕು ನೋಡಲ್ ಅಧಿಕಾರಿ ಬಿ. ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶಿಬಿರದಲ್ಲಿ ಬಹಿರ್ದೆಸೆಯಿಂದ ಹರಡುವ ರೋಗಗಳು ಕುರಿತು, ವೈಯಕ್ತಿಕ ಶೌಚಾಲಯಗಳ ಅವಶ್ಯಕತೆ ಏಕೆ? ವೈಯಕ್ತಿಕ ಶೌಚಾಲಯ ನಿರ್ಮಾಣದ ವಿಧಿ-ವಿಧಾನ ಮತ್ತು ಹಣಕಾಸು ನೆರವು, ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಪ್ರೇರಕರ ಪಾತ್ರ, ಸಾಕ್ಷ್ಯಚಿತ್ರ ಪ್ರದರ್ಶನ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕೆ. ತಳವಾರ್ ತಿಳಿಸಿದ್ದಾರೆ.