ಹೊನ್ನಾವರ: ತಾಲೂಕಿನ ವಿವಿಧೆಡೆ ಶಾಸಕಿ ಶಾರದಾ ಮೋಹನ ಶೆಟ್ಟಿ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಂತ್ರಸ್ತರ ಅಹವಾಲುಗಳಿಗೆ ಸ್ಪಂದಿಸಿದರು. ಹೊನ್ನಾವರ ಪಟ್ಟಣದ ತಗ್ಗುಪಾಳ್ಯ, ತೊಪ್ಪಲಕೇರಿ ಪ್ರದೇಶಗಳಿಗೆ ಭೇಟಿ ನೀಡಿ ಜನವಸತಿ ಪ್ರದೇಶಗಳು ಜಲಾವೃತವಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ದಂಡಾಧಿಕಾರಿ ಬೋರಕರ್, ಎಂ.ಎಸ್. ನಾಯ್ಕ, ವಿನಾಯಕ ಶೇಟ್, ಇರ್ಫಾನ್ ಶೇಖ್ ಮುಂತಾದವರಿದ್ದರು. ಇದೇ ವೇಳೆ ಕುಮಟಾದ ಹಲವೆಡೆಯೂ ಅವರು ಪರಿಶೀಲನೆ ನಡೆಸಿದರು.
ಸೇತುವೆ ದಾಟುವ ಯತ್ನ: ಕೊಚ್ಚಿಹೋದ ಕಾವಲುಗಾರ
ಜೋಯಿಡಾ: ತಾಲೂಕಿನ ರಾಮನಗರ ಹತ್ತಿರ ಚಾಂದೇವಾಡಿ ಸೇತುವೆ ದಾಟಲು ಪ್ರಯತ್ನಿಸಿದ ಸ್ಥಳೀಯ ಅರಣ್ಯ ಇಲಾಖೆ ಕಾವಲುಗಾರ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಬುಧವಾರ ಬೆಳಗ್ಗೆ 7ರ ಸುಮಾರಿಗೆ ನಡೆದಿದೆ. ಶವಕ್ಕಾಗಿ ಪೊಲೀಸ್ ಹಾಗೂ ತಾಲೂಕು ಆಡಳಿತ ಶೋಧ ಕಾರ್ಯದಲ್ಲಿ ತೊಡಗಿದೆ. ತಿನ್ನೇಘಾಟ ವಲಯದ ಚಾಂದೇವಾಡಿ ಅರಣ್ಯ ಬೀಟದಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನ ಜಾನೋಬಾ ಚೌದರಿ (55)ಎಂಬಾತನೆ ನದಿ ರಭಸಕ್ಕೆ ಕೊಚ್ಚಿ ಹೋದ ದುರ್ವೈವಿಯಾಗಿದ್ದಾನೆ. ಚಾಂದೆವಾಡಿ ಹತ್ತಿರದಿಂದ ಹರಿಯುವ ಪಾಂಡ್ರಿ ನದಿ ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ತುಂಬಿಹರಿಯುತ್ತಿದ್ದು, ಸೇತುವೆ ದಾಟಲು ಪ್ರಯತ್ನಿಸಿದಾಗ ದುರ್ಘಟನೆ ಸಂಭವಿಸಿದೆ. ತಹಸೀಲ್ದಾರ್ ಟಿ.ಸಿ. ಹಾದಿಮನಿ ಹಾಗೂ ರಾಮನಗರ ಪಿಎಸ್‌ಐ ಮಂಜೂನಾಥ ನಾಯಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸಂಜೆ ವರೆಗೂ ಶವ ಪತ್ತೆಯಾಗಿಲ್ಲ. ಅರವಿಂದ ಕಾಪೊಲ್ಕರ, ಪ್ರಭಾಕರ ಗಾವಡೆ ಮುಂತಾದವರು ಶೋಧ ಕಾರ್ಯಕ್ಕೆ ಸಹಕರಿಸಿದರು.
ತೆರೆದ ಕೊಳವೆ ಬಾವಿಗಳಿದ್ದರೆ ಈ ನಂಬರ್‌ಗಳಿಗೆ ಕರೆ ಮಾಡಿ
ಶಿರಸಿ: ಶಿರಸಿ ಉಪವಿಭಾಗದ ನಾಲ್ಕು ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನುಪಯುಕ್ತ ಹಾಗೂ ಮುಚ್ಚದೆ ಇರುವ ತೆರೆದ ಕೊಳವೆ ಬಾವಿಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯಕ ಆಯುಕ್ತರ ಕಚೇರಿ ಶಿರಸಿ 08384-226382, ಶಿರಸಿ ತಹಸೀಲ್ದಾರ್ ಕಚೇರಿ 08384-226383, ಮೊ. 9845907876, ಸಿದ್ದಾಪುರ ತಹಸೀಲ್ದಾರ್ ಕಚೇರಿ 08389-230127, ಮೊ. 9008446353, ಯಲ್ಲಾಪುರ ತಹಸೀಲ್ದಾರ್ ಕಚೇರಿ 08419-261129, ಮೊ. 8197503918, ಮುಂಡಗೋಡ ತಹಸೀಲ್ದಾರ್ ಕಚೇರಿ 08301-222122 ಮೊ. 9480456102 ಇವುಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಶಿರಸಿ ಸಹಾಯಕ ಆಯುಕ್ತರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ: ಪೂರ್ವಸಿದ್ಧತಾ ಸಭೆ
ಕಾರವಾರ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಟಿ. ರೇಜು ತಿಳಿಸಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಸಿದ್ಧತಾ ಸಭೆಯಲ್ಲಿ ಈ ಸೂಚನೆ ನೀಡಿದರು. ಮಕ್ಕಳು ಪ್ಲಾಸ್ಟಿಕ್ ಧ್ವಜಗಳನ್ನು ಬಳಸಿ ಬಿಸಾಡದಂತೆ ಶಿಕ್ಷಕರು ನೋಡಿಕೊಳ್ಳಬೇಕು. ರಾಷ್ಟ್ರಧ್ವಜಗಳನ್ನು ಹಾರಿಸುವ ಸಂದರ್ಭದಲ್ಲಿ ಧ್ವಜ ಉತ್ತಮ ಸ್ಥಿತಿಯಲ್ಲಿದ್ದು, ಸಮರ್ಪಕವಾಗಿ ಹಾರುವಂತೆ ಎಚ್ಚರಿಕೆ ವಹಿಸಬೇಕು. ರಾಷ್ಟ್ರಧ್ವಜ ಸಂಹಿತೆಗೆ ಭಂಗವಾಗದಂತೆ ನೋಡಿಕೊಳ್ಳಬೇಕು ಎಂದರು. ಸ್ವಾತಂತ್ರ್ಯೋತ್ಸವವನ್ನು ಈ ಬಾರಿ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಗುವುದು. ಆಚರಣೆಯು ಶಿಸ್ತುಬದ್ಧವಾಗಿರಬೇಕು. ಪೊಲೀಸ್ ಮೈದಾನದಲ್ಲಿ ನಡೆಯುವ ಜಿಲ್ಲಾಮಟ್ಟದ ಕಾರ್ಯಕ್ರಮ ಸಾಂಗವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಹಕರಿಸಬೇಕು. ನಗರಸಭೆ, ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆಗಳ ಪಾತ್ರ ಇದರಲ್ಲಿ ಮುಖ್ಯವಾದುದು ಎಂದರು. ಆ. 15ರಂದು ಬೆಳಗ್ಗೆ 7 ಗಂಟೆಗೆ ಜಿಲ್ಲಾಧಿಕಾರಿ ಅವರ ನಿವಾಸದಲ್ಲಿ ಧ್ವಜಾರೋಹಣ ನೆರವೇರಲಿದೆ. 7.30ಕ್ಕೆ ಎಲ್ಲಾ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. 8 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧ್ವಜಾರೋಹಣ ನಡೆಯಲಿದ್ದು, 9 ಗಂಟೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಸಚಿವರ ಭಾಷಣ, ಪರೇಡ್ ಬಳಿಕ ಮೈದಾನದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೈದಾನವನ್ನು ಸಜ್ಜುಗೊಳಿಸುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯು ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆಸಬೇಕು ಎಂದು ಸೂಚಿಸಿದರು. ನಾಗೇಂದ್ರ,ಸಂಗೀತಾ ಗಜಾನನ ಭಟ್, ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.