ಶಿರಸಿ: ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ಭಾರತದ ನಂತರದ ದಿನಗಳಲ್ಲಿನ ಭಾರತದ ಏಕತೆ, ಶಾಂತತೆ, ಸೌಹಾರ್ದಕ್ಕೆ ಧಕ್ಕೆ ಬರುವ ಘಟನಾವಳಿಗಳ 'ಓ ಭಾರತಿ ನೃತ್ಯ' ರೂಪಕ ಕಾನೂನು ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಿಕ್ಕಿರಿದು ಸೇರಿದ್ದ ಜನ ಪ್ರಶಂಸೆಗೆ ಕಾರಣವಾಯಿತು.
ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ 30ನೇ ದಿನದ 31ನೇ ಕಾನೂನು ಕಾರ್ಯಕ್ರಮ ಹಾಗೂ 30 ದಿನವೂ ಕಾನೂನು ವಸ್ತುಪ್ರದರ್ಶನದೊಂದಿಗೆ ಜರುಗಿದ ಕಾನೂನು ಉತ್ಸವ 2014 ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕಲಾ ತಂಡ ಶಿಕ್ಷಕ ಮನೋಜ ಪಾಲೇಕರ ನೇತೃತ್ವದಲ್ಲಿ ಜರುಗಿದ ನೃತ್ಯ ರೂಪಕ ಕಾನೂನು ಉತ್ಸವದ ಮಹತ್ವ ಹೆಚ್ಚಿಸಿತು.
ದೇಶದಲ್ಲಿ ಜರುಗುತ್ತಿರುವಂಥ ಮಹಿಳಾ ದೌರ್ಜನ್ಯ, ಪರಿಸರ ನಾಶ, ಭಯೋತ್ಪಾದನೆ, ರಾಜಕಾರಣಿಗಳ ಖುರ್ಚು, ಕಿತ್ತಾಟ ಜತೆಯಲ್ಲಿ ದೇಶಕ್ಕಾಗಿ ಸೈನಿಕರ ಕೆಚ್ಚೆದೆಯ ಹೋರಾಟ, ಕಾನೂನು ರಕ್ಷಣೆ ಮೂಲಕ ಜಾಗೃತಿ ಮೂಡಿಸುತ್ತ ರೂಪಕದ ಕೊನೆಯಲ್ಲಿ ದೇಶದ ಶಾಂತಿ, ಏಕತೆ, ಸಾರ್ವಭೌಮತೆ, ಭಾವೈಕ್ಯತೆ, ಸಹೋದರ ಭ್ರಾತ್ವತ್ವದಿಂದ ದೇಶದ ಪ್ರಜೆಯಾಗಿ ಬಾಳಬೇಕೆಂಬ ಸಾರುವ ಅಂಶ ಪರಿಣಾಮಕಾರಿಯಾಗಿ ನೃತ್ಯ ರೂಪಕದಲ್ಲಿ ಬಿಂಬಿತವಾಯಿತು.
ಕಾನೂನು ಉತ್ಸವ ಕೇವಲ ಕಾನೂನಿನ ಕಾರ್ಯಾಗಾರಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಅಡಿಯಲ್ಲಿಯೂ ವಕೀಲರಿಗಾಗಿ ರಚಿಸಲ್ಪಟ್ಟ ಕಾನೂನು ತಾಳಮದ್ದಲೆ ಹೆಗ್ಗಳಿಕೆ ಜತೆಯಲ್ಲಿ ಮನ ಸೆಳೆದ ನೃತ್ಯ ರೂಪಕ ಕಾನೂನು ಉತ್ಸವ 2014ಕ್ಕೆ ಮೆರುಗು ತಂದೊಡ್ಡಿತು.
ನೃತ್ಯ ರೂಪಕದಲ್ಲಿ ರಾಚಪ್ಪ ಜೊಗಳೇಕರ, ಚಂದ್ರಶೇಖರ ಜೊಗಳೇಕರ, ನಾಗರಾಜ ಭಟ್ಟ, ವಿ.ಡಿ. ಹೆಗಡೆ, ಮಧುಕುಮಾರ, ನಾಗರಾಜ ನಾಯ್ಕ ಬರೂರು, ಅಂಬಾದಾಸ್, ಐಶ್ವರ್ಯ, ಸ್ಮೀತಾ, ನಿಖಿತಾ ಪ್ರಿಯಾ ಜೊಗಳೇಕರ, ಸುರೇಶ ಭಟ್ಟ, ದಿವ್ಯಾ ಕಮಟಗಿ, ಗೌರಿಶ ಅಡಿಗುಂದಿ ಅವರ ಪಾತ್ರಗಳು ಕಲಾತ್ಮಕವಾಗಿ ಮೂಡಿಬಂದವು
ದಿವಾಣಿ ಪ್ರಕ್ರಿಯಾ ಸಂಹಿತೆ ಪುಸ್ತಕ ಬಿಡುಗಡೆ
ಶಿರಸಿ: ಸ್ಥಳೀಯ ವಕೀಲರ ಸಂಘದ ಸದಸ್ಯೆ ಸರಸ್ವತಿ ಹೆಗಡೆ ಬರೆದ ದಿವಾಣಿ ಪ್ರಕ್ರಿಯಾ ಸಂಹಿತೆ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ಕಾನೂನು ಉತ್ಸವದ ಸಮಾರೋಪ ಸಮಾರಂಭದ ವಿಶೇಷವಾಗಿತ್ತು.
2 ದಶಕದಿಂದ ಸ್ಥಳೀಯ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಇವರು ಈಗಾಗಲೇ ಸಿವಿಲ್ ರೂಲ್ಸ್ ಆಫ್ ಫ್ರ್ಯಾಕ್ಟೀಸ್, ಕ್ರಿಮಿನಲ್ ರೂಲ್ಸ್ ಆಫ್ ಪ್ರ್ಯಾಕ್ಟೀಸ್, ಇತರೆ ಪುಸ್ತಕಗಳನ್ನು ಬರೆದಿರುವ ಜತೆಗೆ ಇಂದು ಸಿವಿಲ್ ಪ್ರಕ್ರಿಯಾ ಸಂಹಿತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಮನೋಹರ ಹಾಗೂ ಪಿ.ಡಿ. ವೈಂಗಣಕರ್ ಮೂಲಕ ಲೋಕಾರ್ಪಣೆಗೊಂಡಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎ. ರವೀಂದ್ರ ನಾಯ್ಕ, ಉಪಾಧ್ಯಕ್ಷ ಸದಾನಂಧ ಭಟ್ಟ ನಿಡಗೋಡ ಹಾಗೂ ಕಾರ್ಯದರ್ಶಿ ಶ್ರೀಪಾದ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.