ಉತ್ತರ ಕನ್ನಡ

ಕುಮಟಾ: ಭಾರಿ ಮಳೆ

ಕುಮಟಾ:  ತಾಲೂಕಿನಾದ್ಯಂತ ಭಾರಿ ಮಳೆಸುರಿಯುತ್ತಿದ್ದು ಹಳ್ಳ ಕೊಳ್ಳಗಳು ಮೈತುಂಬಿ ಹರಿಯುತ್ತಿವೆ. ಮಂಗಳವಾರ ಮುಂಜಾನೆಯಿಂದ ಒಂದೇ ಸಮನೆ ಮಳೆ ಸುರಿದು ವಾಹನ ಹಾಗೂ ಜನರ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೆಳಗ್ಗೆ 9ರಿಂದ 10.30ರ ತನಕ ಸುರಿದ ಭಾರಿ ಮಳೆಯಿಂದ ಗಟಾರ ತುಂಬಿ ರಸ್ತೆಯ ಮೇಲೆಲ್ಲ ನೀರು ಹರಿಯಿತು. ಶಾಲಾ ಕಾಲೇಜಿಗೆ ಹಾಗೂ ಕೆಲಸಕ್ಕೆ ಹೋಗುವವರು ಪರದಾಡುವಂತಾಯಿತು. ಹೊಸ ಬಸ್ ನಿಲ್ದಾಣ, ಮುರೂರು ಕ್ರಾಸ್ ಇತ್ಯಾದಿ ಭಾಗದ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನುಗ್ಗಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಾಲೂಕಿನ ಎಲ್ಲ ನದಿ, ಹಳ್ಳ, ಕೊಳ್ಳಗಳು ಹಾಗೂ ಎಲ್ಲಾ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಘಟ್ಟದ ಮೇಲ್ಭಾಗದಲ್ಲಿ ಮಳೆ ಹೆಚ್ಚಾದರೆ ನೆರೆ ಬರುವ ಸಂಭವ ಸೃಷ್ಟಿಯಾಗಿದೆ. ಗಾಳಿ ಮಳೆಯಿಂದಾಗಿ ಮರಗಳು ಬಿದ್ದು ಅಲ್ಲಲ್ಲಿ ಸಣ್ಣ ಪುಟ್ಟ ಹಾನಿಗಳ ಹೊರತಾಗಿ ಯಾವ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.

ಕಾಸರಗೋಡಿಗೆ ರಾಷ್ಟ್ರಪತಿ
ಮಂಗಳೂರು: ಕೇರಳಕ್ಕೆ ಹೋಗುವ ಮಾರ್ಗದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜು.18ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2.35ಕ್ಕೆ ಆಗಮಿಸಿ, 2.45ಕ್ಕೆ ಅಲ್ಲಿಂದಲೇ ಹೆಲಿಕ್ಯಾಪ್ಟರ್ ಮೂಲಕ ಕಾಸರಗೋಡಿಗೆ ತೆರಳುವರು. ಕಾರ್ಯಕ್ರಮ ಮುಗಿಸಿ ಸಂಜೆ 5.30ಕ್ಕೆ ಮಂಗಳೂರಿಗೆ ಆಗಮಿಸುವ ರಾಷ್ಟ್ರಪತಿಗಳು ಸಂಜೆ 5.4ಕ್ಕೆ ತಿರುವನಂತಪುರಕ್ಕೆ ಪ್ರಯಾಣ ಬೆಳೆಸುವರು.

ರತ್ನಾ ಕೊಲೆ: ಎರಡು ದಿನದಲ್ಲಿ ವಿಧಿವಿಜ್ಞಾನ ವರದಿ: ಐಜಿಪಿ
ಬೈಂದೂರು: ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಇಲ್ಲಿನ ಶಿರೂರಿನ ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ (17) ಮೃತದೇಹ ವಿಧಿವಿಜ್ಞಾನ ಪರೀಕ್ಷೆಯ ವರದಿ 2 ದಿನಗಳೊಳಗೆ ಬರಲಿದ್ದು, ನಂತರ ಸಾವಿಗೆ ಸ್ಪಷ್ಟ ಕಾರಣಗಳು ತಿಳಿಯಲಿವೆ ಎಂದು ಐಜಿಪಿ ಅಮೃತಪಾಲ್ ಹೇಳಿದ್ದಾರೆ. ಮಂಗಳವಾರ ರತ್ನಾ ಸಾವನ್ನಪ್ಪಿದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದೊಂದು ಬ್ಲೈಂಡ್ ಕೇಸ್  ಆಗಿದ್ದು, ಬಾಹ್ಯವಾಗಿ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಆದ್ದರಿಂದ ವೈದ್ಯಕೀಯ ಪರೀಕ್ಷೆಯನ್ನು ಅವಲಂಬಿ ಸಬೇಕಾಗಿದೆ ಎಂದು ಅವರು ಹೇಳಿದರು.

ಅಜ್ಜಾವರದಲ್ಲಿ ಆನೆ ಹಿಂಡು ದಾಂದಲೆ; ಅಪಾರ ಹಾನಿ
ಸುಳ್ಯ: ಅಜ್ಜಾವರ ಗ್ರಾಮದ ಅಡ್ಪಂಗಾಯ ಪ್ರದೇಶದಲ್ಲಿ ಆನೆ ಹಿಂಡು ದಾಳಿ ನಡೆಸಿದ್ದು, ಹತ್ತು ದಿನಗಳಿಂದ ಅರಣ್ಯ ಇಲಾಖೆ ಆನೆ ಓಡಿಸುವ ಯತ್ನ ವಿಫಲವಾಗಿದೆ. ಭಾನುವಾರ ರಾತ್ರಿ ಮುಡೂರು ಬೆಳ್ಯಪ್ಪ ಗೌಡರ ತೋಟಕ್ಕೆ ನುಗ್ಗಿದ ಆನೆ ಹಿಂಡು 60 ರಬ್ಬರ್ ಮರ, 250 ಬಾಳೆ ಗಿಡ, ಅಡಕೆ ಹಾಗೂ ತೆಂಗಿನ ಮರಗಳನ್ನು ನಾಶಗೊಳಿಸಿವೆ. ಸಮೀಪದ ಎ.ಎಸ್. ಮನ್ಮಥ ಎಂಬವರ ತೋಟಕ್ಕೂ ನುಗ್ಗಿದ್ದ ಕಾಡಾನೆ ಹಿಂಡು 600 ಬಾಳೆ ಗಿಡಗಳನ್ನು ನಾಶ ಮಾಡಿದೆ. ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಸ್ಥಳಕ್ಕೆ ತೆರಳಿ ಪರಿಶೀಲಿದರು. ಒಟ್ಟು 5 ಆನೆಗಳಿರುವ ಹಿಂಡಿನಲ್ಲಿ 2 ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಪಾತಿಕಲ್ಲು ಅರಣ್ಯ ಪ್ರದೇಶಕ್ಕೆ ಈ ಆನೆಗಳು ಹೋಗಿವೆ. ಉಳಿದಂತೆ 1 ಗಂಡು, 1 ಹೆಣ್ಣು ಹಾಗೂ 1 ಮರಿ ಆನೆ ಊರಲ್ಲಿ ದಾಂದಲೆ ಮುಂದುವರಿಸಿದ್ದು, ಹಾಸನದ ಅನುಭವಿ ಕಾರ್ಮಿಕರನ್ನು ಕರೆದು ಅವುಗಳನ್ನು ಓಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆಳಂದೂರಿಗೆ ಕಾಲೇಜ್ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ಜಾಥಾ
ಮಂಗಳೂರು: ಬೆಳಂದೂರಿನ ತಾತ್ಕಾಲಿಕ ಕಟ್ಟಡದಲ್ಲಿ ನಡೆಯುತ್ತಿರುವ ತರಗತಿಯನ್ನು ಕಾಣಿಯೂರಲ್ಲೇ ಮುಂದುವರಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವಲ್ಲಿ ವಿದ್ಯಾರ್ಥಿಗಳು ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಜಾಥ ನಡೆಸಿದರು. ಪ್ರತಿಭಟನೆಯಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಪುತ್ತೂರು ಅಧ್ಯಯನ ವೃತ್ತ ಪ್ರಮುಖ ಪ್ರಜ್ವಲ್ ಬಂಗೇರ ಮಾತನಾಡಿ, ಬೆಳಂದೂರಿನ ತಾತ್ಕಾಲಿಕ ಕಟ್ಟದದಲ್ಲಿ 10ರಿಂದ 13 ಮಂದಿ ವಿದ್ಯಾರ್ಥಿಗಳಿದ್ದು, ಅತಿಥಿ ಉಪನ್ಯಾಸಕರ ಮೂಲಕ ತರಗತಿ ನಡೆಸುತ್ತಿದ್ದರು. ಆದರೆ ಕಾಣಿಯೂರು ಕಾಲೇಜನಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ತಿಳಿಸದೆ ತರಗತಿ ನಡೆಸುವಲ್ಲಿಂದಲೇ ನೇರವಾಗಿ ಬೆಳಂದೂರಿಗೆ ತೆರಳಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಹೆತ್ತವರಿಗೆ ಚಿಂತೆ ಉಂಟಾಗಿದೆ ಎಂದರು. ರಾಜ್ಯ ಕಾರ್ಯ ಕಾರಿಣಿ ಸದಸ್ಯ ಶ್ಯಾಮ್ ಭಟ್ ಮಾತನಾಡಿದರು. ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ನಗರ ಸಂಘಟನೆ ಕಾರ್ಯದರ್ಶಿ ಗಂಗಾಧರ ನಾಯಕ್, ಯತೀಶ್ ಕುಮಾರ್, ಪಿ.ಚೇತನ್ ಕುಮಾರ್ ಪಡೀಲ್, ಆಗ್ನೇಯ ಭಂಡಾರಿ, ಜಯೇಶ್ ಪಿ.ಕೆ. ಮೋಕ್ಷಿತ್, ಸುಧಿತ್. ತ್ರಿಶಲ್, ಚಂದ್ರನಾಥ್ ಇದ್ದರು.

ಪಿಲಿಬೈಲು ನಾರಾಯಣ ಹೊಳ್ಳರಿಗೆ ಬಾರ್ಯ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ
ಪುತ್ತೂರು: ನಿವೃತ್ತ ಶಿಕ್ಷಕ, ಅರ್ಥಧಾರಿ ಪಿಲಿಬೈಲು ನಾರಾಯಣ ಹೊಳ್ಳರಿಗೆ ಈ ಸಾಲಿನ ಬಾರ್ಯ ವಿಷ್ಣುಮೂರ್ತಿ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪ್ಪಿನಂಗಡಿ ರಾಮನಗರದಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿದ್ದ ಅರ್ಥಧಾರಿ, ಉಪನ್ಯಾಸಕ ಗಣರಾಜ ಕುಂಬ್ಳೆ ಮಾತನಾಡಿ, ಯಕ್ಷಗಾನ ಜನಜೀವನದ ಮಧ್ಯೆ ಜೀವಂತವಾಗಿದೆ. ಸದಭಿರುಚಿಯ ಪ್ರೇಕ್ಷಕರನ್ನು ರೂಪಿಸುವ ಕೆಲಸವನ್ನು ತಾಳಮದ್ದಳೆ, ಪ್ರದರ್ಶನಗಳು ಮಾಡಬೇಕಾಗಿದೆ. ಗುಣಮಟ್ಟದ ಪ್ರದರ್ಶನವನ್ನು ನೀಡುವಲ್ಲಿ ಕಲಾವಿದರು ಶ್ರಮಿಸಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಎಸ್. ಉಮೇಶ ಶೆಣೈ ವಹಿಸಿದ್ದರು. ಸಮಾರಂಭವನ್ನು ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು. ಕಲಾವಿದ, ಪತ್ರಕರ್ತ ನಾ.ಕಾರಂತ ಪೆರಾಜೆ ಪ್ರಶಸ್ತಿ ಪುರಸ್ಕೃತರ ಗುಣಕಥನ ಫಲಕ ವಾಚಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಅಭಿನಂದನಾ ನುಡಿ ಸಲ್ಲಿಸಿದ್ದರು. ಅಧ್ಯಾಪಕ ಗುಡ್ಡಪ್ಪ ಬಲ್ಯ ನಿರೂಪಿಸಿದರು. ಟಿ. ರಂಗನಾಥ ರಾವ್ ವಂದಿಸಿದರು. ಬಾರ್ಯ ಪ್ರತಿಷ್ಠಾನ ಮತ್ತು ಸೌಹಾರ್ದ ಯಕ್ಷಗಾನ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಸೌಹಾರ್ದ ಸಮಿತಿ ವತಿಯಿಂದ ಹಿರಿಯ ಕಲಾವಿದ ನೆಲ್ಯಾಡಿ ವಿಠಲ ಆಚಾರ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪನ್ಯಾಸಕ ದಿವಾಕರ ಗೇರುಕಟ್ಟೆ, ಹರೀಶ ಆಚಾರ್ಯ ಉಪಸ್ಥಿತರಿದ್ದರು. ಜ್ವಾಲಾ ಶಪಥ-ಸುಧನ್ವ ಮೋಕ್ಷ ಪ್ರಸಂಗದ ತಾಳಮದ್ದಳೆ ಜರುಗಿತು. ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಗಣರಾಜ ಕುಂಬ್ಳೆ, ಪಕಳಕುಂಜ ಶ್ಯಾಮ ಭಟ್, ನಾ. ಕಾರಂತ ಪೆರಾಜೆ, ದಿವಾಕರ ಗೇರುಕಟ್ಟೆ, ಗುಡ್ಡಪ್ಪ ಬಲ್ಯ ಅರ್ಥಧಾರಿಗಳಾಗಿ ಭಾಗವಹಿಸಿದ್ದರು.

ರು. 30 ಸಾವಿರ ಮೌಲ್ಯದ ಗೋವಾ ಮದ್ಯ ವಶ
ಕಾರವಾರ: ಗೋವಾದಿಂದ ರೈಲ್ವೆ ಮೂಲಕ ಅಕ್ರಮವಾಗಿ ಮದ್ಯ ಸಾಗಾಟ ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು ಸುಮಾರು ರು. 30 ಸಾವಿರ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಈಚೆಗೆ ಖಚಿತ ಮಾಹಿತಿ ಮೇರೆಗೆ ಶಿರವಾಡ ರೈಲ್ವೆ ನಿಲ್ದಾಣದ ಬಳಿಯ ದಾಳಿ ನಡೆಸಿ ಗೋವಾ ಮದ್ಯ ತುಂಬಿದ 180ಎಂಎಲ್ ಅಳತೆಯ ಹನಿ ಗೈಡ್ ಬ್ರ್ಯಾಂಡ್‌ನ 528 ಬಾಟಲ್ ಹಾಗೂ 750ಎಂಎಲ್‌ನ ರಿಯಲ್ಸ್ ವಿಸ್ಕಿಯ 16 ಬಲ್ಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಆರೋಪಿಗಳಾದ ನೀಲಾ ದೇವೇಂದ್ರ ಗೌಡ ಹಾಗೂ ಮಂಜುಳಾ ಯಂಕಪ್ಪ ತಾಂಡೇಲ್ ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ತಿಳಿಸಿದೆ.

ಕಳವು ನಿಯಂತ್ರಣಕ್ಕೆ ಜಾಗೃತಿ ಸಭೆ
ಹೊನ್ನಾವರ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ನಿಯಂತ್ರಣಕ್ಕೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪಟ್ಟಣದ ವರ್ತಕರು, ಚಿನ್ನಾಭರಣ ಅಂಗಡಿ ಮಾಲೀಕರು ಮತ್ತು ಗ್ರಾಮೀಣ ಪ್ರದೇಶದ ದೇವಾಲಯಗಳ ಮೊಕ್ತೇಸರರ ಸಭೆ ನಡೆಸಲಾಯಿತು. ಸಿಪಿಐ ಮಂಜುನಾಥ ಗೌಡ ಮತ್ತು ಪಿಎಸ್‌ಐ ಪರಮೇಶ್ವರ ಗುನುಗಾ ಇವರು ಸಭೆ ನಡೆಸಿ, ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಚಿನ್ನಾಭರಣ ಅಂಗಡಿ ಮಾಲೀಕರು ಹಾಗೂ ದೇವಾಲಗಳ ಮೊಕ್ತೇಸರರು ಬೆಲೆಬಾಳುವ ವಸ್ತುಗಳ ಮತ್ತು ಹಣಗಳನ್ನು ಸುರಕ್ಷಿತ ಲಾಕರ್‌ನಲ್ಲಿ ಇಟ್ಟುಕೊಳ್ಳಬೇಕು. ಅಂಗಡಿಗಳಿಗೆ ಸಿಸಿ ಕ್ಯಾಮೆರಾ  ಅಳವಡಿಸಿಕೊಳ್ಳಬೇಕು. ವಾಚ್‌ಮೆನ್‌ಗಳನ್ನು ನೇಮಕಗೊಳಿಸಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಸಂಶಯಾಸ್ಪದವಾಗಿ ಸಂಚರಿಸುವವರು ಕಂಡುಬಂದಲ್ಲಿ ಠಾಣೆಗೆ ಸುದ್ದಿ ಮುಟ್ಟಿಸಬೇಕು. ಮನೆಗಳಲ್ಲಿ ಒಡವೆ, ಹಣಗಳನ್ನು ಇಟ್ಟುಕೊಳ್ಳದೇ ಬ್ಯಾಂಕ್ ಲಾಕರ್‌ಗಳಲ್ಲಿ ಭದ್ರಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಕೇಂದ್ರದಿಂದ ರು. 347.67 ಕೋಟಿ ಬಡ್ಡಿರಹಿತ ಸಾಲ
ನವದೆಹಲಿ: ರೈತರ ಬಾಕಿ ಪಾವತಿಸಲು ನೆರವಾಗುವಂತೆ ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ರು. 6600 ಕೋಟಿ ಬಡ್ಡಿರಹಿತ ಸಾಲ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕದ 37 ಸಕ್ಕರೆ ಕಾರ್ಖಾನೆಗಳಿಗೆ ರು. 386.21 ಕೋಟಿ ಸಾಲ ಮಂಜೂರಾಗಿದೆ. ಇದರಲ್ಲಿ 31 ಕಾರ್ಖಾನೆಗಳಿಗೆ ರು. 347.67 ಕೋಟಿ ಬಿಡುಗಡೆಯಾಗಿದೆ. ಸಂಕಷ್ಟದಲ್ಲಿರುವ ಕಾರ್ಖಾನೆಗಳಿಗೆ ಆರ್ಥಿಕ ಸಹಾಯ ನೀಡಲು ಬಡ್ಡಿರಹಿತ ಸಾಲ ಮಂಜೂರು ಮಾಡುವ ಸಂಬಂಧ ಜ.3ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಯೋಜನೆಯಲ್ಲಿ ಪಡೆದಿರುವ ಬಡ್ಡಿರಹಿತ ಸಾಲವನ್ನು ರೈತರ ಹಿಂದಿನ ವರ್ಷದ ಬಾಕಿ ಪಾವತಿಗೆ ಬಳಸಬೇಕು ಮತ್ತು ಪ್ರಸಕ್ತ ಸಾಲಿನಲ್ಲಿ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಬೇಕು ಎಂಬ ಷರತ್ತಿನ ಮೇಲೆ ಈ ನೆರವು ಒದಗಿಸಲಾಗುತ್ತಿದೆ. ಬಡ್ಡಿರಹಿತ ಪಡೆದ ಸಾಲವನ್ನು ಕಾರ್ಖಾನೆಗಳು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಈ ಬಗ್ಗೆ ನಿಗಾ ಇಡುವಂತೆ ಆಯಾ ರಾಜ್ಯಗಳ ಸಕ್ಕರೆ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಪಾವತಿಸದ್ದಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ, ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳ ಮೂಲಕ ಕಾರ್ಖಾನೆಗಳಿಗೆ ನೋಟಿಸ್ ಕೂಡ ನೀಡಲಾಗಿತ್ತು. ಇಷ್ಟಾದರೂ ಬಾಕಿ ಪಾವತಿಸದ ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರದ ಕೆಲ ಕಾರ್ಖಾನೆಗಳ ಸಕ್ಕರೆ ಗೋದಾಮಿಗೆ ಬೀಗ ಜಡಿಯಲಾಗಿದೆ.

ಕನಕಗಿರಿ ಪೊಲೀಸ್ ಠಾಣೆಯಲ್ಲಿ ನಡುರಾತ್ರಿ ಪ್ರೇಮಿಗಳ ಮದುವೆ
ಕನಕಗಿರಿ: ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ವೀರಣ್ಣ ಮಗಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸೋಮವಾರ ತಡರಾತ್ರಿ ಸತಿ-ಪತಿಗಳಾಗಿದ್ದಾರೆ. ಮಹೇಶ ತೆಗ್ಗಿನಮನಿ (24) ಹಾಗೂ ರಶ್ಮಿ ಬೊಂದಾಡೆ (19) ಇಬ್ಬರೂ ಗಿಣಿಗೇರಾ ಪಕ್ಕದ ಬೇವಿನಹಳ್ಳಿ ಗಾಳೆಮ್ಮ ದೇವಸ್ಥಾನದಲ್ಲಿ ಶನಿವಾರ ವಿವಾಹವಾಗಿದ್ದರು. ಆದರೆ, ಹುಡುಗಿಯ ಪಾಲಕರು ಈ ವಿವಾಹ ತಿರಸ್ಕರಿಸಿ, ತಮ್ಮ ಮಗಳನ್ನು ಮನೆಗೆ ಕರೆದೊಯ್ದಿದ್ದರು. ಪ್ರಿಯಕರ ಮಹೇಶ್ ಕನಕಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪಿಎಸ್‌ಐ ಹಾಗೂ ಗ್ರಾಮದ ಹಿರಿಯರು ರಶ್ಮಿಯ ಪಾಲಕರಿಗೆ ಸೋಮವಾರ ಸಂಜೆ 5 ಗಂಟೆ ತನಕ ಮನವೊಲಿಕೆಗೆ ಸಮಯ ನೀಡಿದ್ದರು. ತನ್ನ ಪ್ರಿಯಕರನನ್ನು ಬಿಟ್ಟುಕೊಡಲು ರಶ್ಮಿ ಒಪ್ಪದ ಕಾರಣ, ಆಕೆಯನ್ನು ಠಾಣೆಗೆ ಕರೆಸಿ, ಮಹೇಶ್ ಜತೆ ಮದುವೆ ಮಾಡಿಸಲಾಯಿತು. ಹಿರಿಯರಾದ ಗಂಗಾಧರಸ್ವಾಮಿ ಕಲುಬಾಗಿಲಮಠ, ಅಮರಗುಂಡಪ್ಪ ತೆಗ್ಗಿನಮನಿ, ಅಂಬೋಜಿರಾವ್ ಬೊಂದಾಡೆ, ಅನಿಲ ಬಿಜ್ಜಳ, ಶರಣಪ್ಪ ಭಾವಿಕಟ್ಟಿ, ವೀರೇಶ ಕಡಿ, ನೀಲಕಂಠಗೌಡ ಮಾಲಿಪಾಟೀಲ್, ಚಂದ್ರೇಗೌಡ, ಪೊಲೀಸ್ ಪೇದೆಗಳಾದ ಬಸವರಾಜ ಅಮೀನಗಡ, ಸಿದ್ದಯ್ಯ ಕುಕನೂರು, ಸಿದ್ರಾಮಪ್ಪ, ಮಂಜುನಾಥ, ಪ್ರದೀಪಕುಮಾರ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!