ಮುಂಡಗೋಡ: ಅತ್ಯಾಚಾರಿಗಳ ವಿರುದ್ಧ ಕಠಿಣ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಲೊಯೋಲಾ ಜನಸ್ಫೂರ್ತಿ ಟ್ರಸ್ಟ್ ಹಾಗೂ ಇಲ್ಲಿಯ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿನಿಯರ ಸಹಯೋಗದೊಂದಿಗೆ ಗುರುವಾರ ಪಟ್ಟಣದಲ್ಲಿ ಬೃಹತ್ ಮಹಿಳಾ ಜಾಥಾ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಲೊಯೋಲಾ ವಿಕಾಸ ಕೇಂದ್ರದಿಂದ ಪ್ರತ್ಯೇಕವಾಗಿ ಹೊರಟ ಪ್ರತಿಭಟನಾ ಮೆರವಣಿಗೆ ಹುಬ್ಬಳ್ಳಿ-ಶಿರಸಿ ಹೆದ್ದಾರಿಯಲ್ಲಿ ಕೂಡಿಕೊಂಡು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಅತ್ಯಾಚಾರ ಪ್ರಕರಣಗಳ ವಿರುದ್ಧ ಘೋಷಣೆ ಕೂಗಿದರು.
ಶಾಲಾ ಕಾಲೇಜು ಮತ್ತು ನಿರ್ಜನ ಪ್ರದೇಶಗಳಲ್ಲಿ ಬಾಲಕಿ, ಮಹಿಹಿಳೆಯರ ಮೇಲೆ ಹಾಡು ಹಗಲೇ ಅತ್ಯಾಚಾರಗಳು ನಡೆಯುತ್ತಿವೆ. ಇದರಿಂದ ಮಹಿಳೆಯರಿಗೆ ಶಾಂತಿಯೇ ಇಲ್ಲದಂತಾಗಿದೆ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಬಾಲಕಿಯರು ಅತ್ಯಾಚಾರಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇಂಥ ಪ್ರಕರಣಗಳು ಇಡೀ ಮನುಕುಲವನ್ನು ತಲ್ಲಣಗೊಳಿಸಿ ಅಶಾಂತಿ ಸೃಷ್ಟಿಸಿವೆ. ಇಷ್ಟೆಲ್ಲ ಕೃತ್ಯಗಳು ನಡೆದರೂ ಸರ್ಕಾರ, ಜನಪ್ರತಿನಿಧಿಗಳು ಕೈಕಟ್ಟಿಕುಳಿತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆ: ಗೂಂಡಾ ಕಾಯ್ದೆಗೆ ತಿದ್ದುಪಡಿ ಮಾಡಿ ಅತ್ಯಾಚಾರಿಗಳಿಗೆ ಕಂಡಲ್ಲಿ ಗುಂಡು ಹಾರಿಸಬೇಕು. ಯಾವುದೇ ರೀತಿಯ ರಾಜಕೀಯ ಒತ್ತಡಗಳಿಗೆ ಮಣಿದು ಅತ್ಯಾಚಾರಿಗಳಿಗೆ ಆಗಬೇಕಾದ ಶಿಕ್ಷೆ ತಪ್ಪಿಸ ಬಾರದು. ಅತ್ಯಾಚಾರಿ ಸಾಮಾನ್ಯ ಜನರ ಕೈಗೆ ಸಿಕ್ಕಲ್ಲಿ ಅವನನ್ನು ಸ್ಥಳದಲ್ಲಿಯೇ ಹತ್ಯೆಗೈಯಲು ಕಾನೂನು ಕ್ರಮ ಜಾರಿಗೊಳಿಸಬೇಕು. ಈಗಾಗಲೇ ಅತ್ಯಾಚಾರವೆಸಗಿ ಬಂಧಿತರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಇದ್ಯಾವುದನ್ನು ಲೆಕ್ಕಿಸದ ಕಾಲೇಜು ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
--