ದಾಂಡೇಲಿ: ರಾಜ್ಯ ವಕೀಲರ ಸಂಘ, ದಾಂಡೇಲಿ ವಕೀಲರ ಸಂಘ ಹಾಗೂ ಧರ್ಮಶ್ರೀ ಫೌಂಡೇಶನ್ ಅಶ್ರಯದಲ್ಲಿ ದಾಂಡೇಲಿಯ ನ್ಯಾಯಾಲಯ ಆವರಣದಲ್ಲಿ ಐದು ದಿನಗಳ ಕಾಲ ನಡೆದ ಕಾನೂನು ಕಾರ್ಯಾಗಾರ ಸಮಾರೋಪಗೊಂಡಿತು.
ಹುಬ್ಬಳ್ಳಿಯ ನ್ಯಾಯವಾದಿ ಬಿ.ಡಿ. ಹೆಗಡೆ, ವಕೀಲಿ ವೃತ್ತಿಯಲ್ಲಿ ಸಾಕಷ್ಟು ಅನುಭವವಿರಬೇಕು. ಕಾನೂನು, ಸಾಮಾಜಿಕ ಅರಿವು, ದೇಶದ ಸ್ಥಿತಿಗತಿಗಳ ಬಗ್ಗೆ ನಿತ್ಯ ಅರಿತುಕೊಂಡರೆ ಮಾತ್ರ ವಕಾಲತ್ತಿನಲ್ಲಿ ಗೆಲುವು ಕಾಣಲು ಸಾಧ್ಯವೆಂದರು.
ಸಿದ್ದಾಪುರದ ಧರ್ಮಶ್ರೀ ಫೌಂಡೇಶನ್ನ ಅಧ್ಯಕ್ಷ ನ್ಯಾಯವಾದಿ ರವಿ ಹೆಗಡೆ ಹೂವಿನಮನೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಸಿ. ಹೆಗಡೆ ಮಾತನಾಡಿ ಕಾನೂನನ್ನು ಪೂರ್ಣವಾಗಿ ತಿಳಿದುಕೊಂಡಿದ್ದರೆ ಮಾತ್ರ ಯಶಸ್ವಿಯಾಗಿ ವಕಾಲತ್ತು ಮಾಡಲು ಸಾಧ್ಯ ಎಂದರು.
ದಾಂಡೇಲಿಯಲ್ಲಿ 25 ವರ್ಷಗಳ ಕಾಲ ವಕೀಲಿ ವೃತ್ತಿ ಮಾಡಿದ ಹಿರಿಯ ವಕೀಲರಾದ ಅಜಿತ ನಾಯಕ, ಎಸ್.ಎಂ. ದರ್ಗಾರ ಹಾಗೂ ವಿ.ಆರ್. ಹೆಗಡೆ, ಹಳಿಯಾಳದ ಹಿರಿಯ ನ್ಯಾಯವಾದಿ ಪ್ರಕಾಶ ಅಂಗಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಕ್ಷಿತಾ ಹೆಗಡೆ ಹಾಗೂ ಸೃಂಜನಾ ಭಟ್ಟ ಪ್ರಾರ್ಥನೆ ಮಾಡಿದರು. ಅಜಿತ ನಾಯಕ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಸ್. ಸೋಮಕುಮಾರ ಸನ್ಮಾನಿತರ ಪರಿಚಯ ಮಾಡಿದರು. ಎಸ್.ಎಂ. ದರ್ಗಾರ ಸ್ವಾಗತಿಸಿದರು. ರಾಹುಲ್ ಬಾವಾಜಿ, ಎಚ್.ಎಸ್. ಕುಲ್ಕರ್ಣಿ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ವಿಶ್ವನಾಥ ಲಕಶೆಟ್ಟಿ ವಂದಿಸಿದರು.