ಮುಂಬೈಯ ಬಿಷಪ್ ಫಾದರ್ ಲೆಷ್ ಗಾಂಧಿ ಭಕ್ತರಾಗಿದ್ದರು. ಅಪ್ಪಟ ಖಾದಿಧಾರಿಗಳು. ಗಾಂಧೀಜಿಯವರ ಅನುಯಾಯಿಯಾಗಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜನಸೇವೆ ಮಾಡುತ್ತಿದ್ದರು. ಗಾಂಧೀಜಿಯವರು ಹುತಾತ್ಮರಾದ ನಂತರ ಮಹಾತ್ಮರ ಚಿತಾಭಸ್ಮವನ್ನು ಗೋಕರ್ಣದ ತಾಮ್ರಪರ್ಣಿಯಲ್ಲಿ ವಿಸರ್ಜಿಸಲು ತಂದಾಗ ಅದರೊಟ್ಟಿಗೆ ಬಂದಿದ್ದರು. ಅವರ ಬಗ್ಗೆ ಎಲ್ಲರಿಗೂ ಗೌರವ ಮತ್ತು ಪ್ರೀತಿ.
ಏಕೆಂದರೆ ನಿರ್ವ್ಯಾಜ ಪ್ರೀತಿ ಮತ್ತು ನಿರ್ಮಲ ಸೇವಾಭಾವನೆಗೆ ಅವರು ಹೆಸರಾಗಿದ್ದರು. ಐವತ್ತರ ದಶಕದಲ್ಲಿ ಗೋಕರ್ಣದ ಶಂಕರರಾವ್ ್ಗಗುಲ್ವಾಡಿಯವರು ಮಹಿಳಾ ಅಂಬರ್ ಚರಕ ಕೇಂದ್ರದ ಉದ್ಘಾಟನೆಗಾಗಿ ಫಾದರ್ ಲೆಷ್ ಅವರನ್ನು ಮುಂಬೈಯಿಂದ ಕರೆಸಿದ್ದರು. ಅವರನ್ನು ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕರಲ್ಲಿ ಒಬ್ಬರಾಗಿದ್ದ ಶೇಷಂಭಟ್ಟರ ಮನೆಯಲ್ಲಿ ಉಳಿಸಲಾಗಿತ್ತು. ಭಟ್ಟರು ವೇದಪಾರಂಗತರೂ, ಜ್ಞಾನಿಗಳೂ ಆಗಿದ್ದರು. ವೈದಿಕ ಬ್ರಾಹ್ಮಣರಾದರೂ ಅತಿಥಿ ಸತ್ಕಾರದಲ್ಲಿ ಅವರು ಹೆಸರುವಾಸಿಯಾಗಿದ್ದರು.
ಅಂದು ಭಟ್ಟರ ಮನೆಯಲ್ಲಿ ಅವರ ತಂದೆಯವರ ಶ್ರಾದ್ಧವಿತ್ತು. ಬೆಳಗ್ಗಿನಿಂದ ಶ್ರಾದ್ಧಕಾರ್ಯ ತುಂಬಾ ಶ್ರದ್ಧೆಯಿಂದ ನಡೆಯುತ್ತಿತ್ತು. ಮನೆಯ ಒಳಾಂಗಣದಲ್ಲಿ ನಡೆಯುತ್ತಿದ್ದ ಶ್ರಾದ್ಧ ಕಾರ್ಯದಲ್ಲಿ ನಡೆಯುತ್ತಿದ್ದ ಮಂತ್ರೋಚ್ಚಾರಣೆಯನ್ನು ತದೇಕ ಚಿತ್ತದಿಂದ ಬಿಷಪ್ಪರು ಹೊರ ಹಜಾರದಲ್ಲಿ ಕುಳಿತು ಕೇಳಿಸಿಕೊಳ್ಳುತ್ತಿದ್ದರು. ಎಲ್ಲ ಮುಗಿದು ಬ್ರಾಹ್ಮಣರಿಗೆ ಇನ್ನು ಊಟ ಹಾಕುವ ಸರದಿ. ಎಲ್ಲರಿಗೂ ಎಲೆಹಾಕಿ ಬಡಿಸಿ, ಕೈಯಲ್ಲಿ ಬೆಳ್ಳಿಯ ಗಿಂಡಿ ಹಿಡಿದು ಶೇಷಂಭಟ್ಟರು ಹೊರ ಹಜಾರಕ್ಕೆ ಬಂದರು.
ಅಲ್ಲಿ ಕುಳಿತಿದ್ದ ಫಾದರ್ ಲೆಷ್ ಅವರೆದುರು ನಿಂತ ಭಟ್ಟರು ತಮಗೆ ಬರುತ್ತಿದ್ದ ಅಲ್ಪಸ್ವಲ್ಪ ಇಂಗ್ಲಿಷ್‌ನಲ್ಲಿ ಹೀಗೆ ಹೇಳಿದರು, 'ಇಂದು ನನ್ನ ತಂದೆಯ ಶ್ರಾದ್ಧ. ತಾವು ಜಗದ್ಗುರುಗಳು. ತಮ್ಮಂತಹ ಒಬ್ಬ ಶ್ರೇಷ್ಠ ವ್ಯಕ್ತಿ ಶ್ರಾದ್ಧದ ಪಂಕ್ತಿಗೆ ಬ್ರಾಹ್ಮಣಿಕೆಗಾಗಿ ದೊರೆತಿದ್ದು ನನ್ನ ಸೌಭಾಗ್ಯ. ದಯಮಾಡಿ ತಾವು ಈ ದಕ್ಷಿಣೆ ಸ್ವೀಕರಿಸಿ, ನಮ್ಮನ್ನು ಆಶೀರ್ವದಿಸಬೇಕು' ಎಂದು ಬಿಷಪ್ ಭಟ್ಟರಿಗೆ ಹಸ್ತೋದಕ ನೀಡಿ, ವಿಧಿವತ್ತಾಗಿ ಬ್ರಾಹ್ಮಣ ಪೂಜೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರು. ಒಬ್ಬ ವೈದಿಕ ಬ್ರಾಹ್ಮಣ ಅದೂ ವೇದಾಧ್ಯಯನ ಮಾಡಿದ ಅರ್ಚಕ, ವಿಜಾತೀಯನಾದ ತನಗೆ ನೀಡಿದ ಗೌರವದಿಂದ ವಿಚಲಿತರಾದ ಬಿಷಪ್ಪರು ಇದು ಅಪ್ಪಟ ಕ್ರಿಶ್ಚಿಯನ್ ಆದ ತನಗೆ ದೊರೆತ ಬಹುದೊಡ್ಡ ಗೌರವವೆಂದು ಭಾವಿಸಿ, ಆ ಸಾತ್ವಿಕ ಬ್ರಾಹ್ಮಣನ ಮಾನವೀಯತೆಯ ಪವಿತ್ರ ಭಾವನೆಯನ್ನು ಕಂಡು ತುಂಬಾ ಪ್ರಭಾವಿತರಾದರು. ಈ ಸಂಗತಿಯನ್ನು ಕಣ್ಣಾರೆ ಕಂಡ ಗೌರೀಶ ಕಾಯ್ಕಿಣಿಯವರು ತಮ್ಮ ಲೇಖನವೊಂದರಲ್ಲಿ ಈ ವಿಷಯವನ್ನು ದಾಖಲಿಸಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ