ಡಾ. ಶಾಂತಿಸ್ವರೂಪ್ ಭಟ್ನಾಗರ್ ನಮ್ಮ ದೇಶ ಕಂಡ ಅಪ್ರತಿಮ ವಿಜ್ಞಾನಿ. ಈಗ ಪಾಕಿಸ್ತಾನಕ್ಕೆ ಸೇರಿದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿ, ಲಾಹೋರಿನ ದಯಾಲ್ ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿವೇತನ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಮುಂದುವರೆಸಿ, ರಾಸಾಯನಶಾಸ್ತ್ರದಲ್ಲಿ ಪರಿಣತಿ ಪಡೆದರು. ನಂತರ ಭಾರತಕ್ಕೆ ಹಿಂದಿರುಗಿ ಬಂದು ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅನೇಕ ಸಂಶೋಧನೆಗಳನ್ನೂ ಮಾಡಿರುವ ಭಟ್ನಾಗರ್ ತಮ್ಮ ಸಹೋದ್ಯೋಗಿ ಆರ್.ಎನ್.ಮಾಥುರ್ರೊಡನೆ ಸಂಶೋಧಿಸಿದ ಒಂದು ಉಪಕರಣ ಅಯಸ್ಕಾಂತೀಯ ಗುಣಗಳನ್ನು ಕಂಡು ಹಿಡಿಯಲು ಉಪಯೋಗಿಸಲ್ಪಡುತ್ತಿದೆ.
ಒಮ್ಮೆ ಒಂದು ಬ್ರಿಟಿಷ್ ತೈಲ ಕಂಪನಿಯು ರಾವಲ್ಪಿಂಡಿಯ ಬಳಿ ತೈಲಕ್ಕಾಗಿ ಬಾವಿ ತೋಡಲು ಉಪಕರಣಗಳೊಂದಿಗೆ ಬೀಡು ಬಿಟ್ಟಿತ್ತು. ಆದರೆ ಆ ಸ್ಥಳದಲ್ಲಿ ಕೆಸರು ಮತ್ತು ಉಪ್ಪು ಬೆರೆತು ಭೂಮಿ ತುಂಬಾ ಗಡುಸಾಗಿತ್ತು. ಅಲ್ಲಿ ಭೂಮಿಯ ಒಳಗೆ ಭೂಕೊರೆಯುವ ಯಂತ್ರ ಆ ಭೂಮಿಯ ಒಳಗೆ ಹೋಗಲಾರದೆ ಸತಾಯಿಸುತ್ತಿತ್ತು. ಆ ಸಮಸ್ಯೆಗೆ ಎಷ್ಟೋಜನ ತಂತ್ರಜ್ಞರನ್ನು ಸಂಪರ್ಕಿಸಿದರೂ ಯಾವ ಉಪಯೋಗವೂ ಆಗಲಿಲ್ಲ. ದಿನದಿಂದ ದಿನಕ್ಕೆ ಕಂಪನಿಗೆ ನಷ್ಟವಾಗುತ್ತಿತ್ತು. ಕೆಲವರು ಶಾಂತಿಸ್ವರೂಪ ಭಟ್ನಾಗರ್ ಅವರನ್ನು ಸಂಪರ್ಕಿಸಲು ಸಲಹೆ ನೀಡಿದರೂ ಬ್ರಿಟಿಷ್ ಇಂಜಿನಿಯರ್ ಮೊದಮೊದಲಿಗೆ ಒಪ್ಪಲಿಲ್ಲವಾದರೂ ಕೊನೆಗೆ ಅವರಿಂದ ಸಲಹೆ ಪಡೆಯಲು ಸಮ್ಮತಿಸಿದ. ಆಗ ಭಟ್ನಾಗರ್ ದೀರ್ಘಕಾಲ ಯೋಚಿಸಿ, ಪ್ರಯೋಗವಾಡಿ ಒಂದು ರೀತಿಯ ಅಂಟನ್ನು ಉಪಯೋಗಿಸುವುದರಿಂದ ಮಣ್ಣನ್ನು ಮೃದುವಾಗಿ ಕೊರೆಯಲು ಅನುಕೂಲವಾಗುತ್ತದೆಂದು ನಿರೂಪಿಸಿದರು. ಅವರ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸಿದಾಗ ಯಶಸ್ಸು ಸಿಕ್ಕಿತು. ತೈಲ ಕಂಪನಿಯವರು ಭಟ್ನಾಗರ್ ಅವರ ಸಲಹೆಗೆ 1.5.ಲಕ್ಷ ರು.ಗಳನ್ನು ನೀಡಿದರು. ಆದರೆ ಭಟ್ನಾಗರ್ ಆ ಬೃಹತ್ ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿ ಅದನ್ನು ಪಂಜಾಬ್ ವಿಶ್ವ ವಿದ್ಯಾನಿಲಯಕ್ಕೆ ಕೊಡುಗೆಯಾಗಿ ಕೊಡಿಸಿದರು. ಆ ಹಣವನ್ನು ಬಳಸಿ ಪಂಜಾಬ್ ವಿ.ವಿ.ಯಲ್ಲಿ ಪೆಟ್ರೋಲಿಯಂನ ಸಂಶೋಧನೆಗಾಗಿ ವಿನಿಯೋಗಿಸಲು ಒಂದು ವಿಭಾಗವನ್ನು ತೆರೆಯಲಾಯಿತು. ಹೀಗೆ ಹಣಕ್ಕೆ ಆಸೆ ಪಡದೆ ಸೇವೆ ಸಲ್ಲಿಸಿದ ಶಾಂತಿ ಸ್ವರೂಪರು ಆದರ್ಶದ ಮೇಲ್ಪಂಕ್ತಿಯಾಗಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com