ಕನ್ನಡದ ಕಣ್ವ ಎಂದೇ ಕರೆಯಲ್ಪಡುತ್ತಿದ್ದ ಬಿ.ಎಂ.ಶ್ರೀಯವರ ಇಂಗ್ಲಿಷ್ ಕವಿತೆಗಳನ್ನು ಓದಿರುವವರು ತುಂಬಾ ಜನ ಇದ್ದಾರೆ. ಅದರಲ್ಲಿಯೂ 'ಕರುಣಾಳು ಬಾ ಬೆಳಕೆ' ಕವನವಂತೂ ಅತ್ಯಂತ ಪ್ರಸಿದ್ಧವಾದದ್ದು. ಈ ಗೀತೆ ನಮ್ಮ ನಾಡಿನಲ್ಲಿ ಅತ್ಯಂತ ಜನಪ್ರಿಯ ಗೀತೆಗಳಲ್ಲಿ ಒಂದು. ಇದನ್ನು ಸಭೆ ಸಮಾರಂಭಗಳಲ್ಲಿ ಪ್ರಾರ್ಥನಾಗೀತೆಯಾಗಿ ಇಂದಿಗೂ ಹಾಡುವುದನ್ನು ನಾವು ಕೇಳಿದ್ದೇವೆ. ತುಬಾ ಅರ್ಥಗರ್ಭಿತವಾದ ಈ ಕವನ ಜಾನ್ ಹೆನ್ರಿ ನ್ಯೂಮನ್ ಅವರ 'ಲೀಡ್ ಕೈಂಡ್ಲಿ ಲೈಟ್' ಕವನದ ಕನ್ನಡಾನುವಾದ. ಈ ಅನುವಾದದ ಗೀತೆಯನ್ನು ಓದಿದರೆ, ಕೇಳಿದರೆ, ಅದೊಂದು ಅನುವಾದಿತ ಗೀತೆಯೆಂದು ಅನಿಸುವುದೇ ಇಲ್ಲ. ಅಷ್ಟು ಸ್ವಾಭಾವಿಕವಾಗಿ ಮೂಡಿಬಂದಿದೆ. ಈ ಕವನ ಬರೆಯಲು ಪ್ರೇರಣೆಯಾದ ಸಂದರ್ಭ ಮಾತ್ರ ತುಂಬಾ ಸ್ವಾರಸ್ಯಕರವಾಗಿದೆ. ನ್ಯೂಮನ್ ಆಕ್ಸ್ಫರ್ಡ್ನ ಚರ್ಚೊಂದರಲ್ಲಿ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ಅವರು ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹಡಗು ಬಂದರೊಂದರಲ್ಲಿ ಯಾವುದೋ ಕಾರಣದಿಂದಾಗಿ ಒಂದು ವಾರದ ಕಾಲ ನಿಂತುಬಿಟ್ಟಿತು. ಇದರಿಂದ ಹಡಗಿನ ಪ್ರಯಾಣಿಕರು ಕಾಲ ಕಳೆಯಲು ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದರೆ ನ್ಯೂಮನ್ ಮಾತ್ರ ಏಕಾಂತದಲ್ಲಿ ಕೂತು ಬೈಬಲ್ ಓದುವುದು, ಧಾರ್ಮಿಕ ಅಧ್ಯಯನ ನಡೆಸುವುದು ಮಾಡುತ್ತಿದ್ದರು. ಅನಾರೋಗ್ಯದಿಂದ ನರಳುತ್ತಿದ್ದ ಅವರು ತುಂಬಾ ದುರ್ಬಲವಾಗಿ, ನಿಶ್ಶಕ್ತರಾಗಿ ಕುಳಿತಿದ್ದಾಗ ಅವರಿಗೆ ದೇವರ ಬಗೆಗಿನ ಆಲೋಚನೆ ಬಲವಾಯಿತು. ಆಗ ಮೂಡಿಬಂದ ಕವಿತೆಯೇ ಲೀಡ್ ಕೈಂಡ್ಲಿ ಲೈಟ್. ಅದನ್ನು ಹೇಳಿಕೊಂಡಾಗ ಅವರ ಮನಸ್ಸಿಗೆ ಅದೇನೋ ಅವ್ಯಕ್ತ ಸಮಾಧಾನವಾಗುತ್ತಿತ್ತು. ಹೀಗಾಗಿ ಅದನ್ನು ಹಲವಾರು ಬಾರಿ ಹೇಳಿಕೊಂಡು ತಮ್ಮ ಮನಸ್ಸಿನ ದುಗುಡವನ್ನು ನಿವಾರಿಸಿಕೊಳ್ಳುತ್ತಿದ್ದರು. ಇದೀಗ ಈ ಕವಿತೆಗೆ ಬರೋಬ್ಬರಿ ನೂರಾ ಎಂಭತ್ತು ವರ್ಷವಾಗಿದ್ದರೂ ಇನ್ನೂ ಜನಮಾನಸದಲ್ಲಿ ನೆಲೆಯಾಗಿ ನಿಂತಿದೆಯೆಂದರೆ ಅದರ ಸತ್ವ ಎಷ್ಟಿದೆ ಎಂದು ತಿಳಿದುಬರುತ್ತದೆ. ನ್ಯೂಮನ್ನರ ಈ ಕವನದ ಮೊದಲ ಸಾಲುಗಳನ್ನು ಬಿ.ಎಂ.ಶ್ರೀಯವರು ಈ ಕೆಳಗಿನಂತೆ ಅನುವಾದಿಸಿದ್ದಾರೆ. 'ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು...'
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ