ಸೊಳ್ಳೆ
ರಕ್ತದಲ್ಲಿ ಅನುರಕ್ತವಾಗಿರುವ ರಕ್ತಬೀಜಾಸುರ
ಮಾಸ್ಕ್ ಹಾಕಿಕೊಂಡರೂ ಕಚ್ಚುವ ಕೀಟ ಈ ಮಸ್ಕಿಟೋ
ಒಂದರ್ಥದಲ್ಲಿ ನಮ್ಮೆಲ್ಲರ ರಕ್ತ ಸಂಬಂಧಿಯೂ ಹೌದು
ನಮ್ಮೆಲ್ಲರ ದೇಹದಿಂದ ಕದ್ದು ಸಂಗ್ರಹಿಸಿದ ಬ್ಲಡ್ಬ್ಯಾಂಕ್
ಸೊಳ್ಳೆ ಇರುವಲ್ಲಿ ಮನುಷ್ಯ ಮತ್ತು ಮನುಷ್ಯನಿರುವಲ್ಲಿ ಸೊಳ್ಳೆ ಇದ್ದೇ ಇರುತ್ತಾರೆ
ಮನುಷ್ಯನ ಸುಖವನ್ನು ಕದಿಯಲೆಂದೇ ದೇವರು ಮಾಡಿದ ಉಪಾಯ
ಹಾರುವಾಗ ಹಿನ್ನೆಲೆ ಸಂಗೀತದೊಂದಿಗೇ ಹಾರುವ ಕೀಟ
ನೋಡಲು ಇದು ಪಿಳ್ಳೆ. ಕಚ್ಚಿದರೆ ಮಾತ್ರ ತಪ್ಪದು ಗುಳ್ಳೆ
ಬಾಗಿಲು ತೆರೆದರೆ (ಕರೆಯದೆಯೂ ಬರುವ) ಅತಿಥಿ
ಸೊಳ್ಳೆ ಬತ್ತಿ ಕಂಪೆನಿಗಳ ವ್ಯವಹಾರ ಕುದುರಿಸುವ ಕುತಂತ್ರಿ
ಕಿವಿಯ ಬಳಿಯೇ ಬಂದು ಗಾಯನ ಪ್ರಸ್ತುತಿಗೊಳಿಸುವ ಕರ್ಣಪಿಶಾಚಿ
ಪರದಾ ಪದ್ಧತಿಯ ಪ್ರವರ್ತಕ
ಇದಕ್ಕೊಮ್ಮೆ ಮದ್ಯದ ರುಚಿ ಹತ್ತಿಸಿದರೆ ರಕ್ತ ಹೀರುವುದನ್ನು ಬಿಡಬಹುದು
ಇದೊಂಥರಾ ಸಾಕು ಪ್ರಾಣಿಯೂ ಹೌದು. ಕಾರಣ ಕೊಳಚೆ ಗುಂಡಿಗಳನ್ನು ಮಾಡಿ ಪೋಷಿಸುವವರು ನಾವೇ ಅಲ್ಲವೇ
ಒಳ್ಳೆ ಜನರನ್ನೂ ರೊಳ್ಳೆ ಹೊಯ್ದುಕೊಳ್ಳುವ ಕಳ್ಳ ಕೀಟವೇ ಸೊಳ್ಳೆ
ವಿಶ್ವನಾಥ ಸುಂಕಸಾಳ
vishwasunkasal@yahoo.com