(ಗೋವರ್ಧನವ ಎತ್ತಿ ಹಿಡಿದು) ಮಳೆಯನ್ನು ತಡೆದ ಮೋಡದ ಬಣ್ಣದವ
ನವನೀತ ಕಳ್ಳ (ಗೋಪ)ವನಿತೆಯರ ಮಳ್ಳ
ಕಾಯುತ್ತಾ ಕಾಯುತ್ತಾ ದನ ಆದನು ಗೋಪಿಕೆಯರ ಪಾಲಿನ ಮದನ, ಮದಭರಿತರ ಪಾಲಿನ ಸೂದನ
ಪಾರ್ಥನಿಗೆ ಸಾರಥಿ, ಭಕ್ತರಿಗೆ ಕಂಸಾರಾತಿ
ಉಪಾಸಕನಿಗೆ ಮೋಹಕ ಮೂರುತಿ, ಮುಮುಕ್ಷುವಿಗೆ ಮುಕುತಿ, ಜಿಜ್ಞಾಸುವಿಗೆ ಜ್ಞಾತಿ
ಗೋಪರಿಗೆ ಶ್ಯಾಮ, ಗೋಪಿಯರಿಗೆ ಸೋಮ
ನಂಬಿದರೆ ಮುಕ್ತಿಯೊದಗಿಸುವ ಮುಕುಂದ; ನಂಬದಿರೆ ಗೋವಿಂದ
ಪಾಪ ಪಾಂಡವರನ್ನೆಲ್ಲ ರಣರಂಗದಲ್ಲಿ ಕಾಪಾಡಿದ ಪಾಂಡುರಂಗ
ಸ್ಮಶಾನ ವೈರಾಗ್ಯ ತಗುಲಿಸಿಕೊಂಡ ಪುಣ್ಯಾತ್ಮ ಅರ್ಜುನನಿಗೆ ವೇದಾಂತ ಬೋಧಿಸಿದ ಪರಮಾತ್ಮ
ಅಚಾತುರ್ಯಗಳನೆಲ್ಲ ತನ್ನ ಚಾತುರ್ಯದಿಂದಲೇ ತಡೆದ ಚತುರ ಆರ್ಯ- ಗೀತಾಚಾರ್ಯ
ವಿವಸ್ತ್ರಳಾಗುತ್ತಿರುವ ದ್ರೌಪದಿಗೆ ಅಕ್ಷಯ ವಾಸ(ಬಟ್ಟೆ)ವನ್ನು ಕೊಟ್ಟ ವಾಸುದೇವ
ಶೈಶವದಿಂದಲೂ ದೈವಲೀಲೆ ತೋರಿದ ಕೇಶವ
ರಾಧೆಯ ವಿರಹ ಬಾಧೆಯ ಔಷಧನೀತ; ಅನಿರುದ್ಧ
ಕುಚೇಲನಂತಾಗಬೇಕೆಂದರೆ ಈತನ ಚೇಲಾ ಆಗುವುದೊಂದೇ ಮಾರ್ಗ
ದನ ಕಾಯುವವನಷ್ಟೇ ಅಲ್ಲ ಯದುಕುಲ ನಂದನನೂ ಹೌದು
-ವಿಶ್ವನಾಥ ಸುಂಕಸಾಳ
vishwasunkasal@yahoo.com