ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಎನ್.ಜಿ. ವೇಣುಗೋಪಾಲ ಅವರು ಬರೆಯುತ್ತಾರೆ- 'ಸಮಯೋಚಿತ, ಅರ್ಥಪೂರ್ಣ, ಆಕರ್ಷಕ ಶೀರ್ಷಿಕೆಗಳನ್ನು ಕೊಡುವುದರಲ್ಲಿ 'ಕನ್ನಡಪ್ರಭ' ಒಂದು ಒಳ್ಳೆಯ ಹೆಸರು ಮಾಡಿದೆ ಎಂದು ನನ್ನಂಥಾ ಹಲವಾರು ಅಭಿಮಾನೀ ಓದುಗರು ಶ್ಲಾಘಿಸುತ್ತಿರುವ ಈ ಸಮಯದಲ್ಲಿ ಶೀರ್ಷಿಕೆಗಳಲ್ಲೇ ತಪ್ಪು ಕಂಡಿದ್ದರಿಂದ ಈ ಪತ್ರ.'
'ಜ.22ರ ಪತ್ರಿಕೆಯ ಪುಟ 2ರಲ್ಲಿ 'ಕೇಂದ್ರ ಸಚಿವರ ಬೇಜವಾಬ್ದಾರಿ ಹೇಳಿಕೆ' ಶೀರ್ಷಿಕೆಯಲ್ಲಿ 'ಬೇಜವಾಬ್ದಾರಿ' ಪದ 'ಬೇವಾಬ್ದಾರಿ' ಆಗಿದೆ. ವರದಿಯ ಪ್ರಾರಂಭದ 4ನೇ ಸಾಲಿನಲ್ಲಿ 'ಎಂದು ಬಗ್ಗೆ' ಎಂದಿದೆ. ಇಲ್ಲಿ 'ಬಗ್ಗೆ' ಎಂಬ ಪದ ಅವಶ್ಯವಿಲ್ಲ.'
'ಪುಟ 3ರಲ್ಲಿ 'ಕೊಳೆಗೇರಿಯಲ್ಲಿ ಮುಗಿಯಿತು ತೆರವು ಕಾರ್ಯಾಚರಣೆ' ಶೀರ್ಷಿಕೆಯಲ್ಲಿ 'ಕೊಳೆಗೇರಿಯಲ್ಲಿ' ಪದ 'ಕೊಳಗೇರಿಯಲ್ಲಿ' ಆಗಿದೆ. ಪುಟ 4ರಲ್ಲಿ 'ತಪ್ಪಾಗಿದೆ, '108' ಕ್ರಮ ತೊಗೋತೀವಿ' ಎಂಬ ಶೀರ್ಷಿಕೆಯ ಬಗ್ಗೆ, ನಂದಿನಿ ಬಡಾವಣೆಯ ಲತಾ ಅವರು ತಪ್ಪಿನ ಬಗ್ಗೆ ತಿಳಿಸಿದ್ದು, ತಾವು ಅದನ್ನು ಜ.24ರಂದು ಪತ್ರಿಕೆಯ ಅಂಕಣದಲ್ಲಿ ಉತ್ತರಿಸಿದ್ದೀರಿ. "ಕ್ರಮ ತಗೋತೀವಿ' ಎಂಬುದು ಸರಿಯಾದ ಬಳಕೆಯಲ್ಲವೇ' ಎಂದಿದ್ದಾರೆ. ಇಲ್ಲಿ 'ತೊಗೋತಿವಿ' ಪದವನ್ನು 'ತಗೋತೀವಿ' ಎಂದು ತಿದ್ದಿದ್ದಾರೆ. ತಾವು ಅದನ್ನು ಒಪ್ಪಿಕೊಂಡಿದ್ದೀರಿ.'
'ಈ ಶೀರ್ಷಿಕೆಯಲ್ಲಿ ತಿದ್ದಬೇಕಾದದ್ದು ಜಾಸ್ತಿ ಏನಿಲ್ಲ. 'ತೊ'ಗೆ ಇರುವ ದೀರ್ಘ ತಗೊಂಡು 'ತಿ'ಗೆ ನೀಡಿದರೆ ಆಯಿತು. ಇಷ್ಟೇ ಮಾಡಬೇಕಾಗಿರುವುದು. ಅವರು ಮುಂದುವರಿದು 'ತಪ್ಪಾಗಿದೆ ಎಂದು ಬೇರೆಯವರು ಒಪ್ಪಿಕೊಂಡ ಕುರಿತ ಸುದ್ದಿಯಲ್ಲಿ ನೀವು ತಪ್ಪೊಪ್ಪಿಕೊಳ್ಳುವಂತಾಯಿತಲ್ಲ' ಎಂದಿದ್ದಾರೆ. ಇಲ್ಲಿ 'ಒಪ್ಪಿಕೊಂಡ ಸುದ್ದಿಯಲ್ಲಿ' ಸಾಕಾಗಿತ್ತಲ್ಲವೇ? 'ಕುರಿತ' ಅಗತ್ಯವಿರಲಿಲ್ಲ.'
'ಪುಟ 4ರಲ್ಲಿ 'ಅಗ್ನಿ ಅವಘಡ' ಶೀರ್ಷಿಕೆ ಮತ್ತು ವರದಿಯಲ್ಲಿ 'ಅವಗಢ' ಸಂಭವಿಸಿತ್ತು ಎಂದಿದೆ. ಇಲ್ಲಿ 'ಅವಘಡ'ದಲ್ಲಿ 'ಘ' ಮತ್ತು 'ಅವಗಢ' 'ಢ' ಎರಡೂ ಮಹಾಪ್ರಾಣವಲ್ಲ. 'ಅವಗಡ' ಪದ ಸರಿಯಾದ ಬಳಕೆ. ಇದೇ ಪುಟದಲ್ಲಿ 'ಎರಡನೇ ಮಹಡಿಯಿಂದ ಬಿದ್ದ ನರ್ಸಿಂಗ್ ವಿದ್ಯಾರ್ಥಿನಿ' ಶೀರ್ಷಿಕೆಯಲ್ಲಿ 'ನರ್ಸಿಂಗ್‌' ಪದ 'ನರ್ಸಿಗ್‌' ಆಗಿದೆ.'
'ಪುಟ 11ರಲ್ಲಿ 'ಪತಿ ತೊರೆದಾಕೆಯ ವೇಶ್ಯಾವಾಟಿಕೆಗೆ ತಳ್ಳಿದ ಚಾಲಕ: ಮಹಿಳೆ ದೂರು' ಶೀರ್ಷಿಕೆಯಲ್ಲಿ 'ಪತಿ ತೊರೆದಾಕೆಯ' ಪದ 'ಪತಿ ತೊರೆದಾಕೆಯನ್ನು' ಎಂದಿರಬೇಕಿತ್ತು. 'ತೊರೆದಾಕೆಯ' ಅಷ್ಟೇ ಇದ್ದರೆ 'ವೇಶ್ಯಾವೃತ್ತಿ ಪತಿ ತೊರೆದಾಕೆಯದ್ದಾಗಿರುವ' ಅರ್ಥಕೊಡುತ್ತದೆ ಅಲ್ಲವೇ?' ಎಂದಿದ್ದಾರೆ.
ಲತಾ ಅವರು 'ತಗೋತೀವಿ' ಎಂಬುದು ಸರಿ ಎಂದಿದ್ದರು. ಅದು ಸರಿಯೇ ಆಗಿದ್ದುದರಿಂದ ನಾನು ಅದನ್ನು ಒಪ್ಪಿಕೊಂಡಿದ್ದೆ. ತಗೊಳ್ಳಿ, ತಕಳಿ, ತಕಣಿ, ತಕ್ಕೋತೀವಿ ಹೀಗೆ ಸಾಕಷ್ಟು ವಿಧಗಳಿವೆ. ಆದರೆ 'ತೆಗೆದುಕೊಳ್ಳುತ್ತೇವೆ' ಅಥವಾ 'ತಗೋತೀವಿ' ಎಂಬುದು ಸರಿಯಾದ ಬಳಕೆ. ಆಡುಭಾಷೆಯಲ್ಲಿ 'ತೊಗೋತೀವಿ' ಎಂದು ಹೇಳುತ್ತಾರೆ.
ಶೀರ್ಷಿಕೆಯಲ್ಲಿ 'ಯನ್ನು', 'ವನ್ನು', 'ಗಳು', 'ಅವರು' ಮುಂತಾದ ಪದಗಳನ್ನು ಬಳಸುವುದಿಲ್ಲ. ಆದರೂ, ಎನ್.ಡಿ. ವೇಣುಗೋಪಾಲ ಅವರು ಹೇಳಿದ ರೀತಿ ಅರ್ಥ ವ್ಯತ್ಯಾಸವಾಗುತ್ತದೆ ಎಂದು ಅನಿಸುವುದಿಲ್ಲ.
ಇನ್ನು, ಹೆಚ್ಚಿನ ಶಬ್ದಕೋಶಗಳಲ್ಲಿ 'ಅವಘಡ' ಎಂದೆ ಪದಬಳಕೆ ಇದೆ. ನಾವೂ ಹಾಗೆಯೇ ಬಳಸುತ್ತಿದ್ದೇವೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!