ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಅಂತಹ ಗುನ್ಹೆಗಳ ಅಪರಾಧಿಗಳನ್ನು ಶಿಕ್ಷಿಸಲು ಹಾಗೂ ಅದನ್ನು ತಡೆಗಟ್ಟಲು, ಕಾಯಿದೆಗೆ ಮಾರ್ಪಾಟುಗಳನ್ನು ಸೂಚಿಸಲು ನೇಮಕವಾಗಿದ್ದ ನ್ಯಾಯಮೂರ್ತಿ ವರ್ಮಾ ಆಯೋಗ ನಿಗದಿಪಡಿಸಿದ್ದ ಕಾಲದ ಮಿತಿಯಲ್ಲೇ ಒಂದು ಸಮಗ್ರ ಸ್ವರೂಪದ ವರದಿಯನ್ನು ನೀಡಿರುವುದು ನಿಜವಾಗಲೂ ಅಭಿನಂದನಾರ್ಹ.
ವರದಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳ ಸಮಗ್ರ ಚಿತ್ರಣವಿರುವುದು ಒಂದು ಹೆಗ್ಗಳಿಕೆ. ವರದಿಯಲ್ಲಿನ ಕೆಲವು ವಿವಾದಾಸ್ಪದವಾದ ವಿಷಯಗಳನ್ನು ಬಿಟ್ಟು ಉಳಿದ ಶಿಫಾರ್ಸುಗಳನ್ನು ತಡಮಾಡದೇ ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಈಗಾಗಲೇ ಲೋಕಸಭೆಯಲ್ಲಿ ಇಂತಹ ಒಂದು ವಿಧೇಯಕ ಅಂಗೀಕೃತವಾಗಿದೆ. ಆದರೆ ವರ್ಮಾ ಆಯೋಗದ ಶಿಫಾರ್ಸುಗಳು ಅದಕ್ಕಿಂತ ಉತ್ತಮವಾಗಿರುವುದರಿಂದ ಕಾಯಿದೆಯ ಪುನಾರಚನೆ ಅಗತ್ಯ.
ನಿಜ. ಚುನಾಯಿತ ಶಾಸಕರು ಹಾಗೂ ಸಂಸದರ ವಿರುದ್ಧವಿರುವ ಲೈಂಗಿಕ ಅತ್ಯಾಚಾರದ ಆರೋಪಗಳ ಹಿನ್ನೆಲೆಯಲ್ಲಿ, ಅಂತಹವರನ್ನು ಸದಸ್ಯತ್ವದಿಂದಲೇ ಅನರ್ಹರನ್ನಾಗಿ ಮಾಡಬೇಕೆನ್ನುವ ಶಿಫಾರ್ಸನ್ನು ಕಾಯಿದೆಯಲ್ಲಿ ಅಳವಡಿಸುವುದು ಸಾಧ್ಯವಾಗಲಿಕ್ಕಿಲ್ಲ.
ಇಂತಹ ಒಂದೆರಡು ಸಲಹೆಗಳನ್ನು ಬಿಟ್ಟರೆ, 657 ಪುಟಗಳ ಸುದೀರ್ಘ ವರದಿಯಲ್ಲಿನ ಇತರ ಶಿಫಾರ್ಸುಗಳನ್ನು ಜಾರಿಗೆ ತರುವುದರಲ್ಲಿ ಕಾಯಿದೆಯ ಅಡ್ಡಿ ಇರುವುದಿಲ್ಲ. ಆದರೆ ಸರ್ಕಾರಕ್ಕೆ ಈ ವಿಚಾರದಲ್ಲಿ ಸಂಕಲ್ಪ ಶಕ್ತಿಯ ಅಭಾವ ಕಂಡುಬರಬಾರದು.
ದೆಹಲಿಯಲ್ಲಿನ ಒಬ್ಬ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣದ ಹಿನ್ನೆಲೆಯಲ್ಲಿ ದೇಶದ ಎಲ್ಲ ಕಡೆ ನಡೆದ ಆಕ್ರೋಶದ ಪ್ರದರ್ಶನದ ನಂತರ ನೇಮಕವಾದ ವರ್ಮಾ ಆಯೋಗದ ವರದಿ, ಆ ಪ್ರದರ್ಶನಕಾರರ ಮನೋಧರ್ಮಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವುದೂ ನಿಜ.
ಆದರೆ ಸರ್ಕಾರ ಇಂತಹ ವರದಿಯನ್ನು ಇನ್ನೊಂದು ಅಧಿಕಾರಿಗಳ ಸಮಿತಿಗೋ ಅಥವಾ ಸಂಸದೀಯ ಸಮಿತಿಯ ಪರಿಶೀಲನೆಗೋ ಒಪ್ಪಿಸಿ ಕಾಲಹರಣಕ್ಕೆ ಅವಕಾಶ ಮಾಡಿಕೊಟ್ಟರೆ, ಆಯೋಗದ ಕೆಲಸ ವ್ಯರ್ಥವಾದ ವೃಥಾ ಶ್ರಮದಂತೆ ಆಗುತ್ತದೆ ಅಷ್ಟೆ.ಸುದೀರ್ಘ ವರದಿಯ ಪ್ರಕಟಿತ ಸಾರಾಂಶ ಹಾಗೂ ಅದರ ಆಧಾರದ ಮೇಲೆ ಹೊರಬಿದ್ದಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ, ಮಹಿಳೆಯರ ವಿರುದ್ಧದ ಲೈಂಗಿಕ ಅಪರಾಧಗಳ ವಿಚಾರದಲ್ಲಿ ಶೀಘ್ರ ವಿಚಾರಣೆ, ಶೀಘ್ರ ಶಿಕ್ಷೆಯ ಪಾತ್ರವನ್ನು ಬಹುತೇಕವಾಗಿ ಜನ ಒಪ್ಪಿದ್ದಾರೆ ಎನ್ನಬಹುದು. ವರ್ಮಾ ಆಯೋಗದ ವರದಿಯಲ್ಲಿನ ಒಂದು ಪ್ರಮುಖ ಅಂಶವೆಂದರೆ, ಕಾಯಿದೆಯ ವಿಧಿ-ನಿಯಮಗಳ ಪಾಲನೆಯಲ್ಲಿ ಆಸಕ್ತಿ ಹಾಗೂ ದಕ್ಷತೆಯನ್ನು ಪ್ರದರ್ಶಿಸದ ಹಾಗೂ ತನಿಖೆಗೆ ಅಡ್ಡಿ ಪಡಿಸುವ, ದಾರಿತಪ್ಪಿಸುವ ಪ್ರಯತ್ನ ಮಾಡುವ ಪೊಲೀಸ್ ಅಧಿಕಾರಿಗಳಿಗೆ, ಈ ವಿಚಾರದಲ್ಲಿ ಪ್ರಭಾವ ಬೀರಲು ಪ್ರಯತ್ನಿಸುವ ಇತರರಿಗೆ ಸೂಕ್ತ ಪ್ರಮಾಣದ ಶಿಕ್ಷೆಯನ್ನು ವಿಧಿಸಲೂ ಶಿಫಾರ್ಸು ಮಾಡಿರುವುದು.ನಿರ್ದಿಷ್ಟವಾಗಿ ಹಾಗೂ ಸ್ಪಷ್ಟವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಹೊಣೆಗಾರಿಕೆಯನ್ನು ಹೊರಿಸುವ ಪ್ರಯತ್ನವೂ ಈ ವರದಿಯಲ್ಲಿದೆ. ಆ ದೃಷ್ಟಿಯಿಂದ ಒಂದು ರೀತಿಯಲ್ಲಿ ಇತರ ಆಯೋಗಗಳ ಶಿಫಾರ್ಸುಗಳಿಗಿಂತ ಭಿನ್ನವಾಗಿರುವ ರೀತಿಯ ಮನೋಧರ್ಮ ಇಲ್ಲಿ ಪ್ರಕಟವಾಗಿದೆ. ಆದರೆ ಆಯೋಗದಲ್ಲಿದ್ದ ಮೂವರೂ ನ್ಯಾಯಾಂಗ ವ್ಯವಸ್ಥೆಯಲ್ಲಿನ ಜವಾಬ್ದಾರಿಯುತ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುವ ಅನುಭವ ಇದ್ದವರಾದ್ದರಿಂದ, ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗದಲ್ಲಿ ಆಗುವ ವಿಳಂಬ ಹಾಗೂ ಇತರ ಲೋಪದೋಷಗಳ ಪ್ರಸ್ತಾಪವೇ ಇಲ್ಲದಿರುವುದು ಒಂದು ದೊಡ್ಡ ಕೊರತೆ.
ಈ ವರದಿಯ ಕೆಲವು ಶಿಫಾರ್ಸುಗಳಿಂದ ಉದ್ಯಮ ವಲಯದಲ್ಲಿನ ಕಾರ್ಖಾನೆಗಳು ಹಾಗೂ ಕಾರ್ಯಾಲಯಗಳಲ್ಲಿನ ಪ್ರಕರಣದಲ್ಲಿ ಆಡಳಿತ ವ್ಯವಸ್ಥೆ ಹಸ್ತಕ್ಷೇಪ ಮಾಡುವಂತಿಲ್ಲ. ಈ ಪರಿಸ್ಥಿತಿಯನ್ನು ಕುರಿತು ಆತಂಕ ಕೆಲವರಲ್ಲಿ ಮೂಡಿದೆ. ಅದನ್ನೂ ನಿವಾರಿಸಬೇಕು.