ಅರುಣಾಚಲದ ಅವಧೂತ ರಮಣರ ಕುರಿತು ಎಷ್ಟು ಬರೆದರೂ ಸಾಲದು. ಅವರೊಬ್ಬ ಮಾನವೀಯ ಗುಣಗಳ ಖನಿ, ಕರುಣೆ, ಪ್ರೀತಿಯ ಪ್ರತೀಕ. ತಮ್ಮ ಬಳಿಬಂದ ಅಸಂಖ್ಯಾತ ಭಕ್ತರ ಬಗ್ಗೆ ಮಾತ್ರ ಕರುಣೆ ತೋರದೆ, ಪ್ರತಿ ಜೀವಿಗಳ ಬಗ್ಗೆಯೂ ಅಪಾರ ಕಾಳಜಿ ಹೊಂದಿದ್ದ ಮಹಾಪುರುಷ. ಜ್ಞಾನವೆಂಬುದು ಬೇರೆಯವರಿಂದ ಪಡೆಯುವುದಲ್ಲ ಅಥವಾ ಹೊರಗಿನಿಂದ ಬರುವುದಲ್ಲ. ಅದನ್ನು ತನ್ನ ಹೃದಯದಲ್ಲಿಯೇ ಕಂಡುಕೊಳ್ಳಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಆಶ್ರಮದಲ್ಲಿದ್ದ ಅಳಿಲು, ಕೋತಿ, ನಾಯಿ, ಹಸುಗಳ ಬಗ್ಗೆ ಅವರಿಗೆ ಅಪಾರ ಕಾಳಜಿ. ಅವೆಲ್ಲವುಗಳನ್ನೂ ಸುತ್ತಲೂ ಕೂಡಿಸಿಕೊಂಡು ವನಭೋಜನ ಮಾಡಿಸುತ್ತಿದ್ದ ದೃಶ್ಯವನ್ನು ಸ್ಮರಿಸಿದರೇ ರೋಮಾಂಚನವುಂಟಾಗುತ್ತದೆ. ತಮ್ಮ ಪ್ರೀತಿಯ ಹಸು 'ಲಕ್ಷ್ಮಿ' ಸತ್ತಾಗ ಅದಕ್ಕೊಂದು ಸಮಾಧಿಯನ್ನು ಸಹ ಆಶ್ರಮದ ಆವರಣದಲ್ಲಿ ನಿರ್ಮಿಸಿದ್ದರು. ಇಂದಿಗೂ ಪ್ರತಿ ವರ್ಷ ಜೂನ್ 20ನ್ನು 'ಲಕ್ಷ್ಮಿ ದಿನವನ್ನಾಗಿ' ಆಶ್ರಮದಲ್ಲಿ ಆಚರಿಸಲಾಗುತ್ತಿದೆ. ಅಲ್ಲದೆ ನಾಯಿ, ಕಾಗೆಗೂ ಅಲ್ಲಿ ಸಮಾಧಿಗಳಿವೆ. ಒಮ್ಮೆ ರಮಣ ಮಹರ್ಷಿಗಳು ಅರುಣಾಚಲ ಪರ್ವತದಲ್ಲಿ ಸುತ್ತಾಡುತ್ತಿದ್ದಾಗ, ಒಂದು ಪಾರಿವಾಳ ಅವರ ಪಾದಗಳ ಬಳಿ ಬಂದು ಬಿತ್ತು. ಅದನ್ನು ತಮ್ಮ ಕೈಯಲ್ಲಿ ಎತ್ತಿ ಪರೀಕ್ಷಿಸಿದಾಗ ಅದಕ್ಕೆ ಕಲ್ಲೇಟು ತಗಲಿರುವುದು ಗೊತ್ತಾಯಿತು. ಸಮೀಪದಲ್ಲಿಯೇ ಒಬ್ಬ ಹುಡುಗ ಕೈಯಲ್ಲಿ ಕವಣೆ ಹಿಡಿದು ನಿಂತಿರುವುದು ಕಾಣಿಸಿತು. ರಮಣರ ಜೊತೆಗಿದ್ದ ಅವರ ಭಕ್ತರೊಬ್ಬರು ಆ ಹುಡುಗನನ್ನು ಶಿಕ್ಷಿಸಲು ಮುಂದಾದರು. ಆಗ ರಮಣರು
ಅದನ್ನು ತಡೆದು ಆ ಬಾಲಕನನ್ನು ತಮ್ಮ ಬಳಿ ಕರೆದು, 'ಪ್ರಾಣಿಪಕ್ಷಿಗಳಿಗೆ ಹೀಗೆ ತೊಂದರೆ ಕೊಡಬಾರದು' ಎಂದು ಬುದ್ಧಿ ಹೇಳಿ, ಆ ಬಾಲಕ ಆಹಾರಕ್ಕಾಗಿ ಹೀಗೆ ಮಾಡಿದ್ದಾನೆಂದು ತಿಳಿದು ಅವನಿಗೆ ಎರಡಾಣೆ ನೀಡಲು ತಮ್ಮ ಶಿಷ್ಯನಿಗೆ ತಿಳಿಸಿದರು. ಆ ಶಿಷ್ಯನು ಆಶ್ರಮಕ್ಕೆ ಹೋಗಿ ಎರಡಾಣೆ ತಂದು ಆ ಬಾಲಕನ ಕೈಲಿಟ್ಟ.
ನಂತರ ರಮಣರು ಆ ಪಾರಿವಾಳವನ್ನು ಆರೈಕೆ ಮಾಡಿ ಅದರ ನೆತ್ತಿಯ ಮೇಲೆ ಒಂದೆರಡು ಹನಿ ಹಸಿರು ದ್ರಾಕ್ಷಿ ಹಣ್ಣಿನ ಹನಿಗಳನ್ನು ಹಿಂಡಿದರು. ಒಂದೆರಡು ಕ್ಷಣದಲ್ಲಿಯೇ ಆ ಪಾರಿವಾಳ ಎಚ್ಚರಗೊಂಡು ತಾನೀಗ ಆರೋಗ್ಯವಾಗಿದ್ದೇನೆಂದು ಸೂಚಿಸಲು ಒಂದೆರಡು ಹೆಜ್ಜೆ ನಡೆದು ಹಾರಿ ಹೋಯಿತು. ಈ ಒಂದು ಸಣ್ಣ ಪ್ರಸಂಗ ರಮಣರ ಪ್ರಾಣಿದಯೆಯನ್ನು ಸೂಚಿಸುವುದಲ್ಲದೆ, ಆ ಬಾಲಕನ ಬಗೆಗಿನ ಕಾರುಣ್ಯವನ್ನು ಸೂಚಿಸುತ್ತದೆ. ಇಂತಹ ಗುಣಗಳಿಂದಲೇ ಅವರು ಎಲ್ಲರ ಹೃದಯದಲ್ಲಿ ನೆಲೆ ನಿಂತಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com