ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕೆಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಆದಾಯದಲ್ಲಿ ಇಳಿಕೆಯಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಗಮನಿಸಿದೆ.
CM DK Shivakumar
ಡಿಕೆ.ಶಿವಕುಮಾರ್.
Updated on: 

ಬೆಂಗಳೂರು: ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವನ್ನು ಹಂಚಿಕೆ ಮಾಡುವಂತೆ ಜಿಎಸ್‌ಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕೆಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಆದಾಯದಲ್ಲಿ ಇಳಿಕೆಯಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಕಾನೂನಿನ ಪ್ರಕಾರ, ಪ್ರಾಧಿಕಾರ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ. 30ರಷ್ಟು ಮೊತ್ತವನ್ನು ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಬೇಕು. ಈವರೆಗೆ ಪ್ರಾಧಿಕಾರ ಸಂಗ್ರಹಿಸಿರುವ ಆಸ್ತಿ ತೆರಿಗೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿರುವ ಮೊತ್ತದ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಬುಧವಾರ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, 5ನೇ ರಾಜ್ಯ ಹಣಕಾಸು ಆಯೋಗವು ನಿಧಿ ಹಂಚಿಕೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಐದನೇ ರಾಜ್ಯ ಹಣಕಾಸು ಆಯೋಗದ ವರದಿಯ ಪ್ರಕಾರ, ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ 1,261 ಕೋಟಿ ರೂ., ತಾಲೂಕು ಪಂಚಾಯಿತಿಗಳಿಗೆ 557 ಕೋಟಿ ರೂ. ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ 183 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

74ನೇ ಸಂವಿಧಾನ ತಿದ್ದುಪಡಿಯ ಆಶಯದಂತೆ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವುಗಳಿಗೆ ಹೆಚ್ಚಿನ ಅಧಿಕಾರ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

CM DK Shivakumar
ಜಿಎಸ್ಟಿ ಇಳಿಕೆ, ಸಬ್ಸಿಡಿ ಮುಂದುವರಿಕೆ; ಹೆಚ್ಚಾಗಲಿದೆ ಎಲೆಕ್ಟ್ರಿಕ್ ಕಾರುಗಳ ಬಳಕೆ! (ಹಣಕ್ಲಾಸು)

ಸಂಬಂಧಿತ ಕಾನೂನುಗಳಿಗೆ ಸೂಕ್ತ ತಿದ್ದುಪಡಿಗಳನ್ನು ತರುವ ಕುರಿತು ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಮಿತಿಗಳ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಶಿವಕುಮಾರ್ ಹೇಳಿದರು. ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದ ಯೋಜನಾ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದ್ದು, ಅವು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವರದಿಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಯೋಜನಾ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಅನುದಾನ ಒದಗಿಸುವಂತೆಯೂ ನಿರ್ದೇಶನ ನೀಡಿದರು.

ಜನರ ಅಗತ್ಯಗಳು ಮತ್ತು ಬೇಡಿಕೆಗಳನ್ನು ತಳಮಟ್ಟದಿಂದಲೇ ಸಂಗ್ರಹಿಸಿ ರಾಜ್ಯ ಬಜೆಟ್‌ನಲ್ಲಿ ಅಳವಡಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ‘ಜನರ ಯೋಜನೆ’ಯನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com