ಅಪರಾಧಕ್ಕೆ ಸಂಬಂಧಿಸಿದ ಲೇಖನಗಳನ್ನು ಅಪರಾಧಿಗಳೇ ಬರೆದರೆ ಹೇಗಿರುತ್ತದೆ? ಇಂತಹ ಅಪರಾಧಕ್ಕೆ ಮೂಲಕಾರಣಗಳನ್ನು ಇತರರು ಹುಡುಕಿ ತಮ್ಮ ಕಲ್ಪನೆಯ ಮೂಸೆಯಲ್ಲಿ ತಯಾರಿಸಿ ಬರೆಯುವುದಕ್ಕಿಂತ ಅಪರಾಧಿಗಳೇ ತಮ್ಮ ಮನದಾಳದ ಮಾತುಗಳನ್ನು ಬರಹರೂಪದಲ್ಲಿ ಬಿಚ್ಚಿಟ್ಟರೆ ಹೇಗಿರುತ್ತದೆ ಎಂಬುದರ ಪ್ರಯೋಗವೇ ಈ ಪತ್ರಿಕೆಯ ಉದಯಕ್ಕೆ ಕಾರಣವಾಯಿತು. ಇಂತಹ ಒಂದು ಪತ್ರಿಕೆ ಮಾಸಿಕವಾಗಿ ಬಿಡುಗಡೆಯಾದದ್ದು 2009ರ ಜನವರಿ 14ರಂದು ಪೊಂಗಲ್ ದಿನದಂದು. ತಮಿಳುನಾಡಿನ ಜೈಲಿನಲ್ಲಿರುವ ಖೈದಿಗಳ ಕಥೆಯನ್ನು ಏಕೆ ಅವರಿಂದಲೇ ಬರೆಸಬಾರದು ಎಂಬ ಆಲೋಚನೆ ಬಂದಿದ್ದು ಕಾರಾಗೃಹ ಡಿಜಿ ಯಾಗಿದ್ದ ಆರ್.ನಟರಾಜನ್ಗೆ. ತಮ್ಮ ರಾಜ್ಯದ 137 ಜೈಲುಗಳಲ್ಲಿರುವ 16 ಸಾವಿರ ಖೈದಿಗಳದ್ದೂ ಒಂದೊಂದು ಕಥೆ. ಅವರಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಬಾಂಬ್ ಸ್ಫೋಟ ಹೀಗೆ ಹಲವಾರು ಅಪರಾಧಗೈದ ಅಪರಾಧಿಗಳು ಇದ್ದಾರೆ. ಇವರೆಲ್ಲರ ಆತ್ಮನಿವೇದನೆಗೆ ಅವಕಾಶಮಾಡಿಕೊಡಲು ಪ್ರಕಟಿಸಿದ ಪತ್ರಿಕೆಯೇ 'ಉಲ್ ಒಲಿ' ಅಂದರೆ ಅಂತರಂಗದ ಬೆಳಕು.
ಈ 50 ಪುಟಗಳ ಮಾಸಪತ್ರಿಕೆಯ ವಿನ್ಯಾಸಕಾರ ರಾಜೀವ್ ಗಾಂಧಿ ಕೊಲೆ ಸಂಬಂಧದಲ್ಲಿ ಮರಣದಂಡನೆಗೆ ಗುರಿಯಾದ ಸಂತಾನಂ ಎಂಬಾತ. ಮೊದಲ ಸಂಚಿಕೆಯ ಮುಖಪುಟವನ್ನು ಅಲಂಕರಿಸಿರುವುದು ಪ್ರಖ್ಯಾತ ಸೆರೆಯಾಳು ಮಹಾತ್ಮ ಗಾಂಧಿಯದು. ಗಾಂಧೀಜಿ ಚಿತ್ರದ ಕೆಳಗೆ ಹೀಗೆ ಬರೆಯಲಾಗಿದೆ, 'ಸೆರೆಯಾಳುಗಳು ನಾಡಿನ ಸಂಪತ್ತು' ಎಂದು. ಈ ಪತ್ರಿಕೆ ಸೆರಮನೆಯಲ್ಲಿರುವವರ ಪ್ರತಿಭೆಗೆ ಹಿಡಿದ ಕೈಗನ್ನಡಿ ಇದು ಎಂಬುದು ಮಹಾನಿರ್ದೇಶಕ ನಟರಾಜ್ ಅವರ ಅನಿಸಿಕೆ. ಈ ಪತ್ರಿಕೆಯಲ್ಲಿ ಖೈದಿಗಳೇ ಬರೆದ ಅನುಭವೀ ಲೇಖನಗಳಿವೆ, ಆಂತರಿಕ ಭಾವನೆಗಳಿವೆ, ಕವನಗಳಿವೆ ಅಷ್ಟೇ ಏಕೆ ಮೌಲ್ಯಾಧಾರಿತ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳಿವೆ. ಈ ಪತ್ರಿಕೆಯ ಸಂಪಾದಕ ಮಧಾಳಿ ಕಳೆದ 12 ವರ್ಷಗಳಿಂದ ಜೈಲಿನಲ್ಲಿರುವ ಮಹಮದ್ ಹನೀಫ, ಕೊಡೈಕೆನಾಲಿನ ಟಿವಿ ಕೇಂದ್ರಕ್ಕೆ ಬಾಂಬ್ ಇಟ್ಟಿದ್ದ ತಮಿಳಿನ ಪ್ರಸಿದ್ಧ ಕವಿ ಪೋಝಿಲನ್, ರಾಜೀವ್ ಗಾಂಧಿ ಕೊಲೆ ಅಪಾದಿತರು ಹೀಗೆ ಬರೀ ಅಪರಾಧ ಹಿನ್ನಲೆಯವರೇ ಇದ್ದಾರೆ. ಎಲ್ಲ ಲೇಖನಗಳೂ ತಮಿಳಿನಲ್ಲಿದ್ದರೆ ಜೈಲಿನಲ್ಲಿ ಕಳ್ಳ ಸಾಗಾಣಿಕೆ ಅಪಾದನೆ ಎದುರಿಸುತ್ತಿರುವ ಪೋಲೆಂಡಿನ ಪೀಟರ್ ಎಂಬ ಖೈದಿ ಮಾತ್ರ ತನ್ನ ಲೇಖನವನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದಾನೆ. ಅವನು ತನ್ನ ಲೇಖನದಲ್ಲಿ ಜೈಲುವಾಸಿಗಳ ಸಹಕಾರ, ತಮ್ಮ ಸಹ ಖೈದಿಗಳಿಗೆ ನೀಡುವ ಪರಸ್ಪರ ನೆರವು ಇವುಗಳನ್ನು ಅಪಾರವಾಗಿ ಹೊಗಳಿದ್ದಾನೆ. ಈ ಪತ್ರಿಕೆಯಲ್ಲಿ ಸಣ್ಣ ಕಥೆ, ಪದಬಂಧ, ನಟರಾಜ್ರನ್ನು ಹೊಗಳಿ ಬರೆದ ಕವಿತೆ ಮುಂತಾದ ಉಪಯುಕ್ತ ಲೇಖನಗಳಿವೆ. ಮುಂದಿನ ಸಂಚಿಕೆಗಳಲ್ಲಿ ಖೈದಿಗಳ ಆತ್ಮಾವಲೋಕನ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಖೈದಿಗಳ ಅನಿಸಿಕೆಗಳು, ತಮ್ಮ ಅನುಭವಗಳನ್ನು ಪ್ರಸ್ತುತ ಪಡಿಸುವುದು ಹೀಗೆ ಹತ್ತು ಹಲವಾರು ಅಂಕಣಗಳು ಸೇರಲಿವೆ. ಉತ್ತಮ ಮೌಲ್ಯಯುತ ಲೇಖನಗಳನ್ನು ಹೇಗೆ ಬರೆಯಬೇಕು ಎಂಬುದನ್ನು ಕುರಿತು ಕಾರ್ಯಾಗಾರ ನಡೆಸಲು ಸಹ ಯೋಜಿಸಲಾಗಿದೆ. ಆದರೆ ಈ ಪತ್ರಿಕೆ ಅಂಗಡಿಗಳಲ್ಲಿ ಮಾರಾಟಕ್ಕೆ ದೊರಕುವುದಿಲ್ಲ. ಏನಿದ್ದರೂ ಇದನ್ನೋದಲು ಜೈಲುಗಳಿಗೇ ಹೋಗಬೇಕು!
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com