ಮೊಘಲ್ ಸಾಮ್ರಾಟ್ ಶಹಜಹಾನ್ ಕಾಲದಲ್ಲಿ ಪಂಜಾಬ್‌ನಲ್ಲಿ ಬಾಬಾ ಲಾಲ್ ದಯಾಳ್ ಎಂಬ ಹಿಂದು ಸಂತರಿದ್ದರು. ಅವರನ್ನು ಜನ ಭಕ್ತಿಯಿಂದ ಯೋಗಿರಾಜನೆಂದು ಕರೆಯುತ್ತಿದ್ದರು. ಯೋಗಸಾಧನೆ ಮತ್ತು ಅಧ್ಯಯನದಿಂದ ಅವರು ಎಲ್ಲರ ಆದರಕ್ಕೆ ಪಾತ್ರರಾಗಿದ್ದರು. ಸ್ವತಃ ಶಹಜಹಾನ್ ಸಹ ಅವರಲ್ಲಿ ಅಪಾರ ಗೌರವ ಹೊಂದಿದ್ದನು. ಇವನ ನಂತರ ಪಟ್ಟಕ್ಕೆ ಬಂದ, ಹಿಂದುಗಳನ್ನು ಕಂಡರೆ ಕೆಂಡಕಾರುತ್ತಿದ್ದ ಔರಂಗಜೇಬನೂ ಸಹ ಬಾಬಾ ಲಾಲ್ ದಯಾಳ್ ಅವರನ್ನು ಗೌರವಿಸುತ್ತಿದ್ದ ಎಂದರೆ ಅವರ ಹೆಗ್ಗಳಿಕೆ ಅರ್ಥವಾದೀತು.
ಬಾದಶಹ ಶಹಜಹಾನನ ಹಿರಿಯ ಪುತ್ರ ದಾರಾ ಶಿಕೋಹ ಮೊಘಲ್ ಕುಟುಂಬದಲ್ಲಿಯೇ ಒಂದು ಅನರ್ಘ್ಯ ರತ್ನವೆಂದೆನಿಸಿದ್ದ. ಅವನಿಗೆ ಧಾರ್ಮಿಕ ವಿಷಯಗಳ ಅಧ್ಯಯನದ ಬಗ್ಗೆ ಅಪಾರ ಆಸಕ್ತಿ. ಹಿಂದು ಮತ್ತು ಸಿಖ್ ಧರ್ಮದ ಬಗ್ಗೆಯೂ ಆತನಿಗೆ ಅಪಾರ ಒಲವು ಇತ್ತು.
ಹೀಗಾಗಿ ಬಾಬಾ ದಯಾಳರನ್ನು ಕಂಡು ಹಿಂದು ಧರ್ಮದ ಬಗ್ಗೆ ಹೆಚ್ಚಿನ ವಿಚಾರ ತಿಳಿಸುವಂತೆ ಕೇಳಿದ. ಸುಮಾರು ಹತ್ತು ದಿನಗಳು ಬಾಬಾರೊಡನೆ ನಡೆದ ಸಂವಾದ ಅವನಲ್ಲಿ ತೃಪ್ತಿ ತಂದಿತ್ತು ಮತ್ತು ಹಿಂದು ಧರ್ಮದ ಬಗ್ಗೆ ಅವನ ಗೌರವವನ್ನು ಹೆಚ್ಚಿಸಿತು. ಹಿಂದು ತತ್ವಜ್ಞಾನ, ಧರ್ಮಶಾಸ್ತ್ರ, ವೇದೋಪನಿಷತ್ತುಗಳ ಬಗ್ಗೆ ತಿಳಿದುಕೊಂಡ ದಾರಾ ಅವುಗಳನ್ನೆಲ್ಲವನ್ನೂ 'ಗುಲ್ಜಾರೆ ಇಶರಾರೆ' (ರಹಸ್ಯಮಯ ಪುಷ್ಪಾವಳಿ) ಎಂಬ ಹೆಸರಿನಲ್ಲಿ ದಾಖಲು ಮಾಡಲು ಜಾಧವದಾಸ್ ಎಂಬುವನನ್ನು ನೇಮಕ ಮಾಡಿದ. ಸಂಸ್ಕೃತದಲ್ಲಿದ್ದ ಕೆಲವು ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ತರ್ಜುಮೆ ಮಾಡಿದ.
ಸೂಫಿ ತತ್ವಜ್ಞಾನದಲ್ಲಿ ಆಳವಾದ ಜ್ಞಾನ ಸಂಪಾದಿಸಿದ್ದ ಶಿಕೋಹ ಅಂದಿನ ಕಾಲದ ಖ್ಯಾತ ವಿದ್ವಾಂಸನೂ ಆಗಿದ್ದ. ಶಿಕೋಹ ಉರ್ದುವಿನಲ್ಲಿ ಬರೆದ 'ಹಸನತ್-ಉಲ್-ಅರಿಫೀನ್' ಎಂಬ ಕೃತಿಯಲ್ಲಿ ಬಾಬಾ ಲಾಲ್ ದಯಾಳ್ ಅವರ ಬಗ್ಗೆ ಬರೆಯುತ್ತಾ ಹಿಂದುಸ್ತಾನದಲ್ಲಿ ಅವರಂತಹ ಉನ್ನತ ಮಟ್ಟದ ಆಧ್ಯಾತ್ಮಿಕ ಸಾಧಕರನ್ನು, ಸಂತ ಮಹಾತ್ಮರನ್ನು ಬೇರೊಬ್ಬರನ್ನು ನಾನು ಕಂಡಿಲ್ಲ ಎಂದು ತನ್ನ ಗೌರವ ವ್ಯಕ್ತಪಡಿಸಿದ್ದಾನೆ. ಇಂತಹ ದಾರಾ ಭಾರತದ ಚಕ್ರವರ್ತಿಯಾಗಿದ್ದರೆ ಇತಿಹಾಸವೇ ಬದಲಾಗುತ್ತಿತ್ತೋ ಏನೋ. ಆದರೆ ದುರದೃಷ್ಟ. ಅಧಿಕಾರ ದಾಹದ ಔರಂಗಜೇಬ ತನ್ನ ಅಣ್ಣ ದಾರಾನನನ್ನು ಚಿತ್ರಹಿಂಸೆ ಮಾಡಿ ಕೊಲ್ಲಿಸಿದ. ತಂದೆ ಶಹಜಹಾನನನ್ನು ಜೈಲಿನ ಕತ್ತಲೆ ಕೋಣೆಗೆ ತಳ್ಳಿದ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com