ಕೆನಡಾದ ಆ ಬಾಲಕ ನೋಡಲು ತುಂಬಾ ಮುದ್ದಾಗಿದ್ದ. ಬಾಲ್ಯದಲ್ಲಿ ಅವನ ರೂಪು ಎಲ್ಲರ ಗಮನ ಸೆಳೆದಿತ್ತು. ಆಟ ಪಾಠಗಳಲ್ಲಿ ಸದಾ ಮುಂದು. ಪ್ರೌಢಶಾಲೆಯಲ್ಲಿದ್ದಾಗ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿದ್ದ ಆತ ತಾನು ಓದುತ್ತಿದ್ದ ಮೇರಿಹಿಲ್ ಜೂನಿಯರ್ ಪ್ರೌಢಶಾಲೆಗೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದ. ತಾನು ಭವಿಷ್ಯದಲ್ಲಿ ಒಳ್ಳೆಯ ದೈಹಿಕ ಶಿಕ್ಷಣದ ಶಿಕ್ಷನಾಗುವ ಕನಸನ್ನು ಹೊಂದಿದ್ದ. ಆದರೆ ವಿಧಿ ಅವನ ಪಾಲಿಗೆ ಒಲಿದು ಬರಲಿಲ್ಲ. ತನ್ನ 19ನೆಯ ವಯಸ್ಸಿಗೆ ಮೊಣಕಾಲಿಗೆ ತಗಲಿದ ಕ್ಯಾನ್ಸರ್‌ನಿಂದಾಗಿ ಅವನ ಬಲಗಾಲನ್ನು ಕತ್ತರಿಸಿ ಹಾಕಲಾಯಿತು. ಅವನಿಗೊಂದು ಕೃತಕ ಕಾಲನ್ನು ಜೋಡಿಸಲಾಯಿತು. ಅವನಿಗೆ ತನ್ನ ಜೀವನದಲ್ಲಿ ತಾನು ಅಂದುಕೊಂಡಂತೆ ಸಾಧಿಸಲಾಗದಿದ್ದುದಕ್ಕೆ ದುಃಖವಾಯಿತು. ಆದರೂ ಅವನಿಗೆ ಆಟದ ಮೇಲಿನ ವ್ಯಾಮೋಹ ಕಡಿಮೆಯಾಗಲಿಲ್ಲ.
ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್ ಟೀಮನ್ನು ಸೇರಿ ಆಟದಲ್ಲಿ ಪರಿಣತಿ ಪಡೆದ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ತಂದುಕೊಟ್ಟ. ಆದರೂ ಅವನ ಮನಸ್ಸು ಕ್ಯಾನ್ಸರ್ ರೋಗಿಗಳಿಗೆ ಸಹಾಯವಾಗಬಲ್ಲ ಏನಾದರೂ ಒಂದು ಶಾಶ್ವತ ಕಾರ್ಯ ಮಾಡಬೇಕೆಂದು ತುಡಿಯುತ್ತಿತ್ತು. ಅದಕ್ಕಾಗಿ ಮೊದಲು ಜನಜಾಗೃತಿ ಮೂಡಿಸಿ, ಹಣ ಸಂಗ್ರಹಿಸಿ ನೆರವಾಗಬೇಕೆಂದು ನಿರ್ಧರಿಸಿದ. ಅದಕ್ಕಾಗಿ ಕೃತಕ ಕಾಲನ್ನು ಜೋಡಿಸಿಕೊಂಡು ನಡೆದಾಡಲು ಅಭ್ಯಾಸ ಮಾಡಿ ಯಶಸ್ವಿಯೂ ಆದ. 1980ರ ಏಪ್ರಿಲ್ 12 ರಂದು ಕೆನಡಾ ದೇಶಾದ್ಯಂತ ಓಡಿ ಧನ ಸಂಗ್ರಹಿಸಿ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿಯುವ ಸಂಶೋಧನೆಗೆ ಚಾಲನೆ ನೀಡಬೇಕೆಂದು ನಿರ್ಧರಿಸಿದ. ಕೆನಡಾದ 24 ಮಿಲಿಯನ್ ಜನರು ತಲೆಗೊಂದು ಡಾಲರಿನಂತೆ ಕೊಟ್ಟರೂ 24 ಮಿಲಿಯನ್ ಡಾಲರ್ ಸಂಗ್ರಹಿಸಬಹುದೆಂದು ಅವನ ನಂಬಿಕೆಯಾಗಿತ್ತು. ಅಟ್ಲಾಂಟಿಕ್ ಸಮುದ್ರ ತೀರದಿಂದ ಹಿಡಿದು ಫೆಸಿಫಿಕ್ ತೀರದವರೆಗೆ ಅವನ ಓಟ ಏರ್ಪಾಡಾಯಿತು.
ಸಹಸ್ರಾರು ಜನ ಟೆರ್ರಿಯ ಜೊತೆಗೂಡಿದರು. ಹೋದಲ್ಲೆಲ್ಲಾ ಅಪಾರ ಸಂಖ್ಯೆಯ ಜನ ಅವನಿಗೆ ಆತ್ಮೀಯ ಸ್ವಾಗತ ನೀಡಿದರು. ಹೀಗೆ 143 ದಿನಗಳಲ್ಲಿ 5373 ಕಿಲೋಮೀಟರಿನಷ್ಟು ದೂರವನ್ನು ತನ್ನ ಕೃತಕ ಕಾಲಿನಿಂದ ಕ್ರಮಿಸಿದ. ಅವನ ಘನ ಉದ್ದೇಶ ಮತ್ತು ಸಾಹಸವನ್ನು ಮೆಚ್ಚಿ ಕೆನಡಿಯನ್ನರು ಉದಾರವಾಗಿ ಸಹಾಯಮಾಡಿದರು. ಈ ಓಟದಿಂದ ಆತ ಸಂಗ್ರಹಿಸಿದ್ದು ಒಟ್ಟು 23 ಮಿಲಿಯನ್ ಡಾಲರುಗಳು. ಅದನ್ನು ಕ್ಯಾನ್ಸರ್ ಸೊಸೈಟಿಗೆ ನೀಡಿ ಸಂಶೋಧನೆಗಾಗಿ ಬಳಸಬೇಕೆಂದು ವಿನಂತಿಸಿದ. ಅವನ ಈ ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಕೆನಡಾ ಸರ್ಕಾರ 'ಆರ್ಡರ್ ಆಫ್ ಕೆನಡಾ' ಎಂಬ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿತು. ಅದೇರೀತಿ ಅನೇಕ ಪ್ರಶಸ್ತಿಗಳು ಅವನನ್ನು ಹುಡುಕುತ್ತಾ ಬಂದವು. ಆದರೆ ದುರದೃಷ್ಟ, ಹೀಗೆ ಓಡಿ ಓಡಿ ದಣಿದದ್ದರಿಂದ ಮತ್ತು ಸೂಕ್ತ ಚಿಕಿತ್ಸೆ ಪಡೆಯದೇ ಇದ್ದುದರಿಂದ ಅವನಿಗಿದ್ದ ಕ್ಯಾನ್ಸರ್ ಹೃದಯದವರೆಗೆ ವ್ಯಾಪಿಸಿತು. ಹೀಗಾಗಿ ಜೂನ್ 28, 1981 ರಂದು ತನ್ನ 23ನೆಯ ವಯಸ್ಸಿನಲ್ಲಿ ಟೆರಿಫಾಕ್ಸ್ ಕೊನೆಯುಸಿರೆಳೆದ. ಅವನು ಓಡುವ ಭಂಗಿಯಲ್ಲಿರುವ ಒಂದು ಮೂರ್ತಿಯನ್ನು ಒಟ್ಟಾವ ಮತ್ತು ಇನ್ನಿತರ ಕಡೆಗಳಲ್ಲಿ ಸ್ಥಾಪಿಸಲಾಗಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ