ಸಂಪಾದಕೀಯ

ವೈದ್ಯವೃತ್ತಿ ಬಿಟ್ಟ ದುರ್ಗಾಚರಣ

ಅವಿಭಜಿತ ಬಂಗಾಲದ ಒಂದು ಪುಟ್ಟ ಹಳ್ಳಿಯ ಬಾಲಕ ದುರ್ಗಾಚರಣ. ಮೊದಲು ಢಾಕಾ, ನಂತರ ಕೊಲ್ಕತಾದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿ, ವೈದ್ಯರೆನಿಸಿಕೊಂಡರು. ರೋಗಿಗಳ ಆರೈಕೆಯಲ್ಲಿ, ರೋಗಕ್ಕೆ ಮದ್ದು ನೀಡುವುದರಲ್ಲಿ ಅವರನ್ನು ಮೀರಿಸುವವರೇ ಇರಲಿಲ್ಲ. ಹೀಗಾಗಿ ಅವರ ಬಳಿ ಬಹಳಷ್ಟು ಜನ ರೋಗಿಗಳು ಬರುತ್ತಿದ್ದರು. ಬಂದವರಿಗೆಲ್ಲಾ ಹಗಲು ರಾತ್ರಿಯೆನ್ನದೆ ಔಷಧೋಪಚಾರ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಬಹುಬೇಗ ಜನಪ್ರಿಯತೆ ಗಳಿಸಿದರು. ಬಡವರನ್ನು ಮತ್ತು ನಿರ್ಗತಿಕರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಂಥಹವರು ಚಿಕಿತ್ಸೆಗಾಗಿ ಬಂದರೆ ಅವರಿಂದ ಹಣವನ್ನೂ ಪಡೆಯದೆ, ತಮ್ಮ ಬಳಿಯಿದ್ದ ವಸ್ತುಗಳನ್ನೂ ನೀಡಿ ಶ್ರದ್ಧೆಯಿಂದ ಚಿಕಿತ್ಸೆ ನೀಡುತ್ತಿದ್ದರು. ಇದರ ಜೊತೆಗೆ ಸಮಯ ಸಿಕ್ಕಾಗಲೆಲ್ಲ ಶಾಸ್ತ್ರಾಭ್ಯಾಸ, ಧ್ಯಾನ, ಉಪವಾಸ ಮತ್ತಿತರ ವ್ರತಗಳಲ್ಲಿ ತಲ್ಲೀನನಾಗಿರುತ್ತಿದ್ದರು. ಅತೀ ಸರಳ ಉಡುಪನ್ನು ಧರಿಸಿ ಪರೋಪಕಾರವೇ ಶ್ರೇಷ್ಠ ಧರ್ಮವೆಂದು ಭಾವಿಸಿದ್ದರು. ಒಮ್ಮೆ ಶ್ರೀಮಂತನೊಬ್ಬ ತನ್ನ ಬಹುದಿನದ ಖಾಯಿಲೆಯನ್ನು ಗುಣಪಡಿಸಿದ್ದಕ್ಕಾಗಿ ಐವತ್ತು ರುಪಾಯಿಗಳನ್ನು ನೀಡಿದರೆ ಅದರಲ್ಲಿ ಇಪ್ಪತ್ತು ಮಾತ್ರ ತೆಗೆದುಕೊಂಡು ಉಳಿದ ಹಣವನ್ನು ಅವನಿಗೇ ಹಿಂದಿರುಗಿಸಿದರು. ಇದನ್ನು ತಿಳಿದ ಅವರ ತಂದೆ ಆಕ್ಷೇಪಣೆ ಮಾಡಿದಾಗ ನ್ಯಾಯವಲ್ಲವೆಂದು ತಿಳಿದುದನ್ನು ಪ್ರಾಣಹೋದರೂ ಮಾಡಲಾರೆ ಎಂದುಬಿಟ್ಟರು. ಎಷ್ಟೋ ಬಾರಿ ಬಡ ರೋಗಿಗಳಿಗೆ ತಮ್ಮಲ್ಲಿದ್ದ ಹಣ, ವಸ್ತುಗಳನ್ನು ಕೊಟ್ಟುಬಿಡುತ್ತಿದ್ದರು.
ಒಂದು ದಿನ ದುರ್ಗಾಚರಣರು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು. ಅವರನ್ನು ನೋಡಿದವರೇ ಪರಮಹಂಸರು 'ಬಂದಿರಾ, ಬನ್ನಿ, ನಾನು ನಿಮಗೋಸ್ಕರ ಇಷ್ಟು ದಿನ ಕಾಯುತ್ತಿದ್ದೆ' ಎಂದು ಹೇಳಿದಾಗ ದುರ್ಗಾಚರಣರಿಗೆ ರೋಮಾಂಚನವುಂಟಾಯಿತು. ನಂತರ ಸತತವಾಗಿ ರಾಮಕೃಷ್ಣರನ್ನು ಕಂಡು ಮಾತನಾಡಿಸುವ ಹಂಬಲವುಂಟಾಯಿತು.
ಅವರನ್ನು 'ನಾಗಮಹಾಶಯ'ರೆಂದೇ ಪರಮಹಂಸರು ಸಂಬೋಧಿಸುತ್ತಿದ್ದರು. ಒಂದು ದಿನ ಪರಮಹಂಸರನ್ನು ಭೇಟಿ ಮಾಡಲು ಹೋಗಿದ್ದಾಗ ಇನ್ನೊಬ್ಬ ಭಕ್ತನಿಗೆ ಹೀಗೆ ಹೇಳುತ್ತಿದ್ದರು, 'ವೈದ್ಯರು, ವಕೀಲರಿಗೆ  ಧರ್ಮಲಾಭವಾಗುವುದು ಕಠಿಣ. ವೈದ್ಯರಿಗೆ ಸದಾ ಔಷಧೋಪಚಾರದ ಬಗ್ಗೆಯೇ ಮನಸ್ಸಿರುತ್ತದೆ. ಅದು ಪರಮಾತ್ಮನ ಕಡೆಗೆ ಹೊರಳುವುದಿಲ್ಲ' ಎಂದು ಹೇಳುತ್ತಿದ್ದುದನ್ನು ಕೇಳಿ ಅಂದಿನಿಂದ ತಮ್ಮ ನೆಚ್ಚಿನ ವೈದ್ಯಕೀಯ ವೃತ್ತಿಯನ್ನು ಬಿಟ್ಟು ಬಿಟ್ಟರು. ತಮ್ಮ ಔಷಧದ ಪೆಟ್ಟಿಗೆ, ಪುಸ್ತಕಗಳನ್ನು ಗಂಟುಕಟ್ಟಿ ಗಂಗಾನದಿಗೆ ಒಗೆದರು. ನಂತರ ಆಧ್ಯಾತ್ಮಿಕ ಜೀವನವನ್ನು ಅನುಸರಿಸಿ, ಪರೋಪಕಾರಿಗಳಾಗಿ, ಕೊನೆಯವರೆಗೂ ಸನ್ಯಾಸ ಜೀವನ ಮಾಡಿ ಮುಕ್ತಿಪಡೆದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ