ಇತ್ತೀಚೆಗೆ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ನಮ್ಮ ದೇಶದಲ್ಲಿ ಹೆಚ್ಚಾಗುತ್ತಾ ಇದೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದ ಎಲ್ಲ ದೇಶಗಳ ಸಮಸ್ಯೆಯೂ ಆಗಿದೆ. ಅದರಲ್ಲೂ ಜಿಂಬಾಬ್ವೆಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಅತ್ಯಾಚಾರಕ್ಕೊಳಪಟ್ಟ ಮಕ್ಕಳ ಪಾಡಂತೂ ಹೇಳತೀರದು. ಆದರೆ ಅದಕ್ಕೆ ಅಪವಾದವೆಂಬಂತೆ ಜಿಂಬಾಬ್ವೆಯಲ್ಲಿ ನಡೆದ ಒಂದು ಘಟನೆ, ಇಂದು ಅಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಬಾಳುವಂತೆ ಮಾಡಿದೆ. ಇಂತಹ ಒಂದು ಅದ್ಭುತವನ್ನು ಸಾಧಿಸಿದ ವ್ಯಕ್ತಿ ಬೆಟ್ಟಿ ಮಾಕೋನಿ. ಬೆಟ್ಟಿ ಆರು ವರ್ಷದ ಹಸುಳೆಯಾಗಿದ್ದಾಗ ಅತ್ಯಾಚಾರಕ್ಕೊಳಗಾದಳು. ಅವಳನ್ನು ಸಂತೈಸಲು ಇದ್ದ ಪ್ರೀತಿಯ ತಾಯಿಯೂ ತಂದೆಯಿಂದ ಕೊಲೆಯಾದಾಗ ಬೆಟ್ಟಿಯ ಜೀವನ ದುರ್ಭರವಾಯಿತು. ತನಗೆ ಒದಗಿದ ಪರಿಸ್ಥಿತಿ ಇನ್ನಾವ ಮಹಿಳೆಗಾಗಲೀ, ಬಾಲಕಿಗಾಗಲೀ ಬರಬಾರದು ಎಂದಾಲೋಚನೆ ಅವಳ ಮನಸ್ಸಿನಲ್ಲಿ ಸುಳಿಯಿತು.
1998 ರಲ್ಲಿ ಅವಳು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ತನ್ನ ತರುಣ ಶಿಕ್ಷಕಿಯೊಡನೆ ಚರ್ಚಿಸಿ ಹತ್ತು ಜನ ಸಹಪಾಠಿ ಬಾಲಕಿಯರೊಡಗೂಡಿ, ಒಂದು ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದಳು. ಅದಕ್ಕೆ 'ಗರ್ಲ್ ಚೈಲ್ಡ್ ನೆಟ್ವರ್ಕ್' ಎಂದು ನಾಮಕರಣ ಮಾಡಿ ಅದರ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಲೈಂಗಿಕ ಹಲ್ಲೆಗೊಳಗಾದವರ ನೆರವಿಗೆ ಮತ್ತು ಇಂತಹ ಹೇಯ ಕೃತ್ಯಗಳ ವಿರುದ್ಧ ಜನಜಾಗ್ರತಿ ಮೂಡಿಸುವ ಕಾರ್ಯವನ್ನು ಕೈಗೊಂಡಳು. ಇದು ಅದೆಷ್ಟು ಪ್ರಸಿದ್ಧಿ ಪಡೆಯಿತೆಂದರೆ ಅಲ್ಪ ಕಾಲದಲ್ಲಿಯೇ ಸುಮಾರು 35 ಸಾವಿರ ಹೆಣ್ಣು ಮಕ್ಕಳಿಗೆ ಇಲ್ಲಿ ರಕ್ಷಣೆ ಪಡೆಯಲು ಮತ್ತು ಮನೋಸ್ಥೈರ್ಯ ಗಳಿಸಲು ಸಾಧ್ಯವಾಯಿತು. ಅಲ್ಲದೆ ಹೆಣ್ಣು ಮಕ್ಕಳು ಇಂತಹ ಕೃತ್ಯಗಳ ವಿರುದ್ಧ ತಮ್ಮ ದನಿಯೆತ್ತಲು ಪ್ರಾರಂಭಿಸಿದರು. ತಮಗಾದ ಕೆಟ್ಟ ಅನುಭವಗಳು, ತಾವು ಅನುಭವಿಸಿದ ಮಾನಸಿಕ ಹಿಂಸೆಗಳನ್ನು ಇತರರೊಡನೆ ಹಂಚಿಕೊಳ್ಳುವ ವೇದಿಕೆಯಾಯಿತು ಜಿ.ಸಿ.ಎನ್. ಈ ಸಂಸ್ಥೆಯು ಅದೆಷ್ಟು ಪ್ರಸಿದ್ಧಿ ಪಡೆಯಿತೆಂದರೆ ಶಿಕ್ಷಕರು, ಬಾಲಕಿಯರು ಮತ್ತು ಶಾಲೆ ಪ್ರತಿದಿನ ಸಂಸ್ಥೆಯನ್ನು ಸಂಪರ್ಕಿಸಿ ಸಲಹೆ, ಸಹಕಾರ ಪಡೆಯುತ್ತಿವೆ. ಇದರಿಂದಾಗಿ ಉತ್ತಮ ನೌಕರಿಯಲ್ಲಿದ್ದ ಬೆಟ್ಟಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಈಗ ಸಂಪೂರ್ಣ ಜಿ.ಸಿ.ಎನ್.ಸಂಸ್ಥೆಗೆ ತನ್ನ ಜೀವನವನ್ನು ಮುಡುಪಾಗಿಟ್ಟಿದ್ದಾಳೆ. ಜಿಂಬಾಬ್ವೆಯ ಎಲ್ಲ ಪ್ರದೇಶಗಳಿಗೂ ಭೇಟಿನೀಡಿ ತೊಂದರೆಗೊಳಗಾದವರನ್ನು ಭೇಟಿಮಾಡಿ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬುವ ಕೆಲಸದಲ್ಲಿ ನಿರತಳಾಗಿದ್ದಾಳೆ. ನೂರಾರು ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ ಅವರಿಗೆ ವಿದ್ಯಾಭ್ಯಾಸ ಮಾಡಸಿ, ನೌಕರಿ ಕೊಡಿಸಿ ಜೀವನ ಸಂಗಾತಿಯನ್ನೂ ಒದಗಿಸಿಕೊಡುವ ಶಾಶ್ವತ ಕೆಲಸವನ್ನೀಗ ಈ ಸಂಸ್ಥೆ ಮಾಡುತ್ತಿದೆ. ಅನೇಕ ಸಂಘಸಂಸ್ಥೆಗಳು, ಸರ್ಕಾರದ ಇಲಾಖೆಗಳೂ ಸಹ ಸಂಸ್ಥೆಯ ಕೆಲಸಕಾರ್ಯಗಳಲ್ಲಿ ನೆರವಾಗುತ್ತಿವೆ. ಇದೀಗ ತಮ್ಮ ಕಾರ್ಯ ಚಟುವಟಿಕೆಯನ್ನು ಇಂಗ್ಲೆಂಡಿಗೆ ಸ್ಥಳಾತರಿಸಿದ್ದು ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಮತ್ತು ಅನಾಥ ಪ್ರಜ್ಞೆಯನ್ನು ಮರೆಯುವಂತೆ ಮಾಡಿದೆ. ಬೆಟ್ಟಿ ಮಾಕೋನಿ ಇನ್ನು ಮುಂದೆ ಹೆಣ್ಣುಮಕ್ಕಳ ಮೇಲೆ ಈ ರೀತಿಯ ಕ್ರೌರ್ಯ ನಡೆಯದಂತೆ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com