ಸಾಮ್ಯುಟಿಜ ಲ್ಲಾಂಗ್ಹೋರ್ನ್ ಕ್ಲೆಮೆನ್ಸ್ ಅಮೆರಿಕದ ಫ್ಲೋರಿಡಾದ ಕಡುಬಡ ಕುಟುಂಬದಲ್ಲಿ ಜನಿಸಿದ. ಚಿಕ್ಕಂದಿನಲ್ಲಿಯೇ ಮುದ್ರಣಾಲಯವೊಂದರಲ್ಲಿ ಕೆಲಸಕ್ಕೆ ಸೇರಿ, ನಂತರ ಕೆಲವು ವರ್ಷ ನಾವಿಕನಾಗಿ, ಕೊನೆಗೆ ಚಿನ್ನವನ್ನರಸಿ ಪಶ್ಚಿಮದ ಕಡೆ ಹೊರಟ. ಹೀಗೆ ಅವನು ಹೋಗಿ ತಲುಪಿದ್ದು ನೆವಡಾಕ್ಕೆ. ಅಲ್ಲಿ ಅವನಿಗೆ ಯಾವ ಚಿನ್ನವೂ ದೊರೆಯಲಿಲ್ಲ. ಅದರ ಬದಲಾಗಿ ಅವನ ಬಾಳಿಗೊಂದು ಆಯಾಮ ಸಿಕ್ಕಿತು. ತನ್ನ ಹಾಸ್ಯ ಲೇಖನಗಳಿಂದಾಗಿ ಕೆಲವೇ ದಿನಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಲ್ಲದೆ ತನ್ನ ಹೆಸರನ್ನು ಮಾರ್ಕ್ ಟ್ವೈನ್ ಎಂದು ಬದಲಾಯಿಸಿಕೊಂಡ. ಒಂದು ಪತ್ರಿಕೆಗೆ ಸಹ ಸಂಪಾದಕನಾಗಿ ಸೇರಿಕೊಂಡ. 1866 ರಲ್ಲಿ ಸ್ಯಾಂಡ್ವಿಚ್ ದ್ವೀಪಗಳಿಗೆ ಹೋಗಿ ಬಂದು ತನ್ನ ಅನುಭವಗಳನ್ನು ಪತ್ರಿಕೆಗಳಿಗೆ ಬರೆದ. ಜನ ಅವನ ಲೇಖನ ಶೈಲಿಗೆ ಮನಸೋತರು. ಅವನ ಲೇಖನಗಳನ್ನೋದಿದವರು ಅವನ ಮಾತುಗಳನ್ನು ಕೇಳಲು ಉತ್ಸುಕರಾದರು. ಅದನ್ನೇ ದಾಳವಾಗಿಟ್ಟುಕೊಂಡು ಭಾಷಣಮಾಡಿ ಹಣ ಪಡೆಯಲು ಪ್ರಾರಂಭಿಸಿದ. ಅದೂ ವ್ಯಕ್ತಿಯೊಬ್ಬರಿಗೆ ಒಂದು ಡಾಲರಿನಂತೆ ಜನ ಅವನ ಹಾಸ್ಯ ಭರಿತ ಮಾತುಗಳನ್ನು ಕೇಳಲು ಸಂತೋಷದಿಂದಲೇ ಹಣ ನೀಡಿದರು. ಇದರಿಂದ ಅವನ ಬಳಿ ಹಣ ಜಮೆಯಾಗತೊಡಗಿತು.
ಅವನ ಪ್ರಸಿದ್ಧ ಕೃತಿಗಳೆಂದರೆ ಟಾಮ್ ಸಾಯರ್ ಮತ್ತು ಹಕಲ್ ಬೆರಿ ಫಿನ್, ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಕಟವಾದ ಈ ಕೃತಿಗಳು ವಿಶ್ವದ ಹಲವಾರು ಭಾಷೆಗಳಿಗೂ ಅನುವಾದಗೊಂಡು ಪ್ರಸಿದ್ಧವಾದವು. ಅದಕ್ಕೂ ಮುನ್ನ 'ದಿ ಜಂಪಿಂಗ್ ಫ್ರಾಗ್' ಎಂಬ ಕೃತಿಯನ್ನು ರಚಿಸಿ ಅದರ ಪ್ರಕಟಣೆಗೆ ಕಾರ್ಲೆಟನ್ ಎಂಬ ಪ್ರಕಾಶಕರ ಬಳಿ ಹೋದಾಗ ಅದನ್ನೋದಿದ ಕಾರ್ಲೆಟನ್ ಅದು ಪ್ರಕಟಣೆಗೆ ಯೋಗ್ಯವಾಗಿಲ್ಲವೆಂದು ನಿರಾಕರಿಸಿದ. ಸರಿಯಾಗಿ ಇಪ್ಪತ್ತೊಂದು ವರ್ಷಗಳ ನಂತರ ಮಾರ್ಕ್ ಟ್ವೈನ್‌ನ ಪುಸ್ತಕಗಳಿಗಾಗಿ ಸರದಿ ಸಾಲಿನಲ್ಲಿ ನಿಂತ ಪ್ರಕಾಶಕರಲ್ಲಿ ಈ ಕಾರ್ಲೆಟನ್ ಸಹ ಒಬ್ಬನಾಗಿದ್ದ!
ಅದಕ್ಕಿಂತ ಸ್ವಾರಸ್ಯಕರ ಸಂಗತಿಯೆಂದರೆ, ಮಾರ್ಕ್ ತನ್ನ 'ದಿ ಇನೋಸೆಂಟ್ಸ್ ಅಬ್ರಾಡ್' ಕೃತಿಯ ಪ್ರಕಟಣೆಗೆ ಒಂದು ಪ್ರಕಾಶನ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡ. ಆದರೆ ಆ ಸಂಸ್ಥೆಯವರು ಆರ್ಥಿಕ ಮುಗ್ಗಟ್ಟಿನಿಂದ ಎಷ್ಟು ದಿನಗಳಾದರೂ ಅದನ್ನು ಪ್ರಕಟಿಸದೇ ಇದ್ದಾಗ, ಒಪ್ಪಂದವನ್ನು ಮುರಿದು ಆ ಪುಸ್ತಕದ ಹಸ್ತಪ್ರತಿಯನ್ನು ಪಡೆಯಲು ಆ ಪ್ರಕಾಶನ ಸಂಸ್ಥೆ ಮಾರ್ಕ್‌ಗೆ ಪ್ರಾರ್ಥಿಸಿತು. ಆದರೆ ಮಾರ್ಕ್ ನಿರಾಕರಿಸಿದಾಗ ನಿರ್ವಾಹವಿಲ್ಲದೆ, ತಮ್ಮ ಆರ್ಥಿಕ ದುಸ್ಥಿತಿಯಲ್ಲಿಯೂ ಆ ಕೃತಿಯನ್ನು ಪ್ರಕಟಿಸಲೇಬೇಕಾಯಿತು. 1869ರಲ್ಲಿ ಆ ಪುಸ್ತಕ ಪ್ರಕಟವಾದಾಗ ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಓದುಗರಿಂದ ದೊರೆತು, ಆ ಪುಸ್ತಕ ಮಾರಾಟದಿಂದ ಆ ಸಂಸ್ಥೆಯ ಎಲ್ಲ ಸಾಲವೂ ತೀರಿ, ಮೇಲೆ 70ಸಾವಿರ ಡಾಲರ್‌ನಷ್ಟು ಲಾಭ ಸಂಪಾದಿಸಿತು!
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
vishwasunkasal@yahoo.com