ಸಂಪಾದಕೀಯ

ಗಳಗನಾಥರ ಕ್ಷಮೆಯಾಚಿಸಿದ ವೈದ್ಯರು

ಕನ್ನಡ ಕಾದಂಬರಿ ಲೋಕದ ಆದ್ಯ ಪ್ರವರ್ತಕರಲ್ಲಿ ಒಬ್ಬರು ಗಳಗನಾಥರು. ಪ್ರಸಿದ್ಧಿಗಾಗಿ ಹಂಬಲಿಸದೆ ಒಂದು ನೂರು ವರ್ಷಗಳ ಹಿಂದೆ ಕನ್ನಡ ಪುಸ್ತಕಗಳನ್ನು ತಲೆ ಮೇಲೆ ಹೊತ್ತು ಊರೂರು ತಿರುಗಿ, ಮಾರಾಟಮಾಡುತ್ತಿದ್ದ ಅವರ ಸಾಹಿತ್ಯ ಸೇವೆ ಎಲ್ಲರ ಮನ ಗೆದ್ದಿತ್ತು. ತಮ್ಮ ಸದ್ಭೋದ ಪತ್ರಿಕೆಯಲ್ಲಿ ಕಾದಂಬರಿಗಳನ್ನು ಪ್ರಕಟಿಸಿ ಎಲ್ಲರ ಪ್ರಶಂಸೆಗೆ ಗುರಿಯಾದರು. ಅವರ ಪೂರ್ಣ ಹೆಸರು ವೆಂಕಟೇಶ ತಿರಕೊ ಕುಲಕರ್ಣಿ. ಪಾಂಡಿತ್ಯದ ಸಮುದ್ರವೇ ಆಗಿದ್ದ ಗಳಗನಾಥರು ಅಂದಿನ ಕನ್ನಡ ಜನತೆಯಲ್ಲಿ ಕಾದಂಬರಿಯ ಸದಭಿರುಚಿಯನ್ನು ಬಿತ್ತಿದರು. ಅವರ ಈಶ್ವರ ಸೂತ್ರ, ಕುಮುದಿನಿ, ಛತ್ರಪತಿ, ಕನ್ನಡಿಗರ ಕರ್ಮಕಥೆ, ಕಮಲಕುಮಾರಿ ಮುಂತಾದ 29 ಕೃತಿಗಳು ಜನರಲ್ಲಿ ಸಾಹಿತ್ಯ ಪ್ರೇಮವನ್ನು ಬೆಳೆಸಲು ನೆರವಾಗಿದ್ದವು. ಒಮ್ಮೆ ಗಳಗನಾಥರು ತಮ್ಮ ಪುಸ್ತಕದ ಗಂಟನ್ನು ಹೊತ್ತುಕೊಂಡು ಹೈದರಾಬಾದಿಗೆ ಹೋಗಿದ್ದರು. ಅಲ್ಲಿನ ಕನ್ನಡಿಗರ ಮನೆಯನ್ನು ಪತ್ತೆ ಹಚ್ಚಿ ಅವರ ಮನೆ ಬಾಗಿಲಿಗೇ ಹೋಗಿ ಮಾರಾಟ ಮಾಡಿ ಅಲ್ಪ ಸ್ವಲ್ಪ ಹಣ ಗಳಿಸಿದರು. ಹಾಗೆಯೇ ಉತ್ತರ ಕರ್ನಾಟಕದಿಂದ ಹೋಗಿ ಸಾಕಷ್ಟು ಹಣ ಸಂಪಾದನೆ ಮಾಡಿ, ಅಲ್ಲಿಯೇ ನೆಲೆಸಿದ್ದ ಪ್ರಖ್ಯಾತ ವ್ಯೆದ್ಯರ ಆಸ್ಪತ್ರೆಗೊಮ್ಮೆ ಹೋದರು. ತಾವೇ ತಮ್ಮ ಪರಿಚಯಮಾಡಿಕೊಂಡು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತರು. ಗಳಗನಾಥರ ಬಗ್ಗೆ ಆ ವೈದ್ಯರು ಕೇಳಿದ್ದರೂ, ಅವರು ಸಾಹಿತ್ಯ ಪ್ರಿಯರಾಗಿರಲಿಲ್ಲ. ಆದ್ದರಿಂದ ತಮಗೆ ಯಾವ ಪುಸ್ತಕದ ಅವಶ್ಯಕತೆಯೂ ಇಲ್ಲವೆಂದೂ, ಬೇರೆ ಇನ್ನೆಲ್ಲಿಯಾದರೂ ಪ್ರಯತ್ನಿಸಬಹುದೆಂದು ಕಠೋರವಾಗಿ ನುಡಿದರು. ಇಂತಹ ಅನುಭವ ಅನೇಕ ಬಾರಿ ಗಳಗನಾಥರಿಗೆ ಆಗಿದ್ದುದರಿಂದ ಅವರೇನೂ ಬೇಸರಿಸಲಿಲ್ಲ. ಆದರೂ ತಾವು ಬಂದಿದ್ದಕ್ಕೆ ಒಂದು ಪುಸ್ತಕವನ್ನಾದರೂ ಕೊಳ್ಳಬೇಕೆಂದು ವಿನಂತಿಸಿದರು. ಆಗ ವೈದ್ಯರು ಬೇಸರದಿಂದ ತಮ್ಮ ಜೇಬಿನಿಂದ ಎಂಟಾಣೆಯನ್ನು ತೆಗೆದಿಟ್ಟು, ಅದಕ್ಕೆ ಬರುವ ಯಾವುದಾದರೊಂದು ಪುಸ್ತಕ ಕೊಡಲು ಹೇಳಿದರು. ಆಗ ಗಳಗನಾಥರು ಆ ಬೆಲೆಗೆ ಸರಿಯಾದ ಒಂದು ಚಿಕ್ಕ ಪುಸ್ತಕವನ್ನು ನೀಡಿ ಕೃತಜ್ಞತೆ ತಿಳಿಸಿ ಮುಂದೆ ಸಾಗಿದರು. ಅದೇ ದಿನ ರಾತ್ರಿ ಆ ವೈದ್ಯರ ಪತ್ನಿ ಗಳಗನಾಥರನ್ನು ಹುಡುಕಿಕೊಂಡು ಬಂದು ತಮ್ಮ ಪತಿಯ ನಡವಳಿಕೆಗಾಗಿ ಪಶ್ಚಾತ್ತಾಪ ಪಟ್ಟಿದ್ದೇ ಅಲ್ಲದೆ, ಮರುದಿನ ತಮ್ಮ ಮನೆಗೆ ಬರಲೇಬೇಕೆಂದು ದುಂಬಾಲು ಬಿದ್ದರು. ಮರುದಿನ ಸ್ವತಃ ವೈದ್ಯರೇ ಗಳಗನಾಥರಿದ್ದಲ್ಲಿಗೆ ಬಂದು, ಕಾರಿನಲ್ಲಿ ಮನೆಗೆ ಕರೆದೊಯ್ದರು. ವೈದ್ಯರ ಮನೆಗೆ ಹೋದಾಗ ದೊಡ್ಡ ಪವಾಡವೇ ನಡೆಯಿತು. ಸಾಹಿತ್ಯ ಪ್ರಿಯರಾದ ವೈದ್ಯರ ಪತ್ನಿ ಗಳಗನಾಥರನ್ನು ಸತ್ಕರಿಸಿ, ಉಪಚರಿಸಿದರು. ಊಟೋಪಚಾರವೆಲ್ಲ ಮುಗಿದ ಮೇಲೆ ಗಳಗನಾಥರ ಎಲ್ಲ ಕೃತಿಗಳನ್ನೂ ಕೊಂಡುಕೊಂಡರು. ವೈದ್ಯರೂ ಸಹ ಹಿಂದಿನ ದಿನ ತಾವು ಉಪೇಕ್ಷಿಸಿ ಮಾತನಾಡಿದ್ದಕ್ಕೆ ಕ್ಷಮೆಯಾಚಿಸಿದರಲ್ಲದೆ, ಅಲ್ಲಿ ನೆಲೆಸಿದ್ದ ಕನ್ನಡಿಗರ ಮನೆಮನೆಗೆ ಗಳಗನಾಥರನ್ನು ಕರೆದೊಯ್ದು ಅವರನ್ನು ಪರಿಚಯಿಸಿ, ಪುಸ್ತಕ ಮಾರಲು ನೆರವಾದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ