ಸಂಪಾದಕೀಯ

ಪ್ರಶ್ನೆಯನ್ನು ತಿದ್ದಿ ಉತ್ತರಿಸಿದ ವಿದ್ಯಾರ್ಥಿ

ಒಂದು ಕಾಲದಲ್ಲಿ ಕಾಲೇಜಿನ ಪ್ರಾಧ್ಯಾಪಕರೆಂದರೆ ಸಮಾಜಕ್ಕೊಂದು ಮಾದರಿಯಂತಿದ್ದರು. ಅವರ ಪ್ರತಿಯೊಂದು ನಡವಳಿಕೆಗಳೂ ಅನುಕರಣೀಯವಾಗಿದ್ದವು. ಅಂತಹ ಪ್ರಾಧ್ಯಾಪಕರಲ್ಲಿ ಒಬ್ಬರು ಡಾ.ಸುಕುಮಾರ್ ಸೇನ್. ಪದ್ಮಭೂಷಣ ಡಾ.ಸುಕುಮಾರ್ ಸೇನ್ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರೊಬ್ಬ ಪ್ರಕಾಂಡ ಪಂಡಿತರಾಗಿದ್ದು, ಪಾಲಿ, ಪ್ರಾಕೃತ, ಬೆಂಗಾಲಿ ಮತ್ತು ಸಂಸ್ಕೃತದಲ್ಲಿ ವಿದ್ವಾಂಸರಾಗಿದ್ದರು. ಬೆಂಗಾಲಿ ಇತಿಹಾಸ ಚರಿತ್ರೆಯನ್ನೂ ಬರೆದು ಪ್ರಸಿದ್ಧರಾಗಿದ್ದಾರೆ. ಅವರೊಬ್ಬ ಅಪರೂಪದ ಪ್ರಾಧ್ಯಾಪಕರು. ಅವರ ಇರುವಿಕೆಯನ್ನು ಗುರುತಿಸಿಯೇ ವಿಶ್ವದ ಅನೇಕ ಕಡೆಗಳಿಂದ ವಿದ್ಯಾರ್ಥಿಗಳು ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಬಂದು ಅಧ್ಯಯನ ಮಾಡುತ್ತಿದ್ದರು. ವೈದಿಕ ಸಂಸ್ಕೃತಕ್ಕೆ ಸಂಬಂಧಿಸಿದಂತೆ ಅವರನ್ನು ಸರಿಗಟ್ಟುವ ಇನ್ನೊಬ್ಬ ವಿದ್ವಾಂಸರು ಬಹುಶಃ ಇರಲೇ ಇಲ್ಲ ಎನ್ನಬಹುದು. ಅಷ್ಟರ ಮಟ್ಟಿಗೆ ಅವರ ಖ್ಯಾತಿ ಬೆಳೆದಿತ್ತು. ಅವರು ಓದುತ್ತಿರುವಾಗಲೂ ತಮ್ಮ ಅಸಾಧಾರಣ ಪ್ರತಿಭೆಯಿಂದ ಎಲ್ಲ ಪ್ರಾಧ್ಯಾಪಕರಿಗೂ ಅಚ್ಚುಮೆಚ್ಚಿನವರಾಗಿದ್ದರು. ಲಂಡನ್ ಏಷಿಯಾಟಿಕ್ ಸೊಸೈಟಿಯಿಂದ ಗೌರವಿಸಲ್ಪಟ್ಟ ಮೊದಲ ಏಷ್ಯನ್ ವಿದ್ವಾಂಸ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಅವರು ಎಂ.ಎ. ವಿದ್ಯಾರ್ಥಿಯಾಗಿದ್ದಾಗ ಪ್ರಶ್ನಪತ್ರಿಕೆಯಲ್ಲಿ ಒಂದು ತಪ್ಪಾದ ಪ್ರಶ್ನೆಯನ್ನು ಕೇಳಲಾಗಿತ್ತು. ಅದನ್ನು ಗಮನಿಸಿದಾಗ ಪ್ರಶ್ನಪತ್ರಿಕೆಯಲ್ಲಿಯೂ ಹೀಗೆ ತಪ್ಪೆಸಗಬಹುದೆ ಎಂದು ಸೇನ್ ಅವರಿಗೆ ಬೇಸರವಾಯಿತು. ಆಗ ಅವರು ಪ್ರಶ್ನೆ ಪತ್ರಿಕೆಯನ್ನು ತಿದ್ದಿ, ಅದಕ್ಕೆ ಉತ್ತರವನ್ನು ಬರೆದರು. ಅಲ್ಲದೆ ಅದರ ಕೆಳಗೆ, ಈ ಪ್ರಶ್ನೆ ಕೇಳಿದವರಿಗೆ ತಿಳಿವಳಿಕೆ ಸಾಲದು ಎಂದು ಟಿಪ್ಪಣಿ ಸಹ ಬರೆದಿದ್ದರು!
ಪರೀಕ್ಷೆ ನಡೆದು ಕೆಲದಿನಗಳ ನಂತರ ಒಂದು ದಿನ ತಮ್ಮ ಗುರುಗಳಾದ ಡಾ.ಸುನೀತ ಕುಮಾರ ಚಟರ್ಜಿಯವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದರು. ಅಲ್ಲಿ ಆ ದಿನ ತೀರ ಅನಿರೀಕ್ಷಿತವಾಗಿ ಅವರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಪರೀಕ್ಷಕರಾದ ಡಾ.ತಾರಾಪೋರೆಯವರನ್ನು  ಭೇಟಿಯಾದರು. ಅವರೂ ಸಹ ದೊಡ್ಡ ವಿದ್ವಾಂಸರು. ಸೇನ್ ಅವರ ಪರಿಚಯವಾಗುತ್ತಲೇ, "ಇವರೇ ಅಲ್ಲವೆ ನನ್ನ ಪ್ರಶ್ನೆಯನ್ನು ತಿದ್ದಿ ಉತ್ತರ ಬರೆದು, ಕೆಳಗೆ ಟಿಪ್ಪಣಿ ಬರೆದವರು?" ಎಂದು ಪ್ರಶ್ನಿಸಿದರು. ಡಾ.ಚಟರ್ಜಿ ಹೌದೆಂದು ನಗುತ್ತಾ ಹೇಳಿದಾಗ, ಸೇನ್ ಬೆವತು ಹೋದರು. ಮುಂದೇನು ಕಾದಿದೆಯೋ ಎಂದು ಆತಂಕ ಗೊಂಡಿದ್ದ ಸೇನ್ ಅವರ ಬೆನ್ನು ತಟ್ಟುತ್ತಾ, ತುಂಬಾ ಸಂತೋಷ. ನೀನು ಬರೆದ ಟಿಪ್ಪಣೆ ಸರಿಯಾಗಿತ್ತು. ಉತ್ತರವೂ ಅದ್ಭುತವಾಗಿತ್ತು. ನಿನಗೆ ಶುಭವಾಗಲಿ ಎಂದು ಬಾಯಿತುಂಬ ಹರಸಿದರು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!