ಸಂಪಾದಕೀಯ

ಸಾವಿನ ನಂತರವೂ ಕರ್ತವ್ಯ ನಿರತ ಸೈನಿಕ!

ಭಾರತೀಯ ಸೈನ್ಯದ ಸಿಪಾಯಿಯೊಬ್ಬ ಮರಣಿಸಿ ಮೂವತ್ತು ವರ್ಷಗಳಾದರೂ ಇಂದಿಗೂ ನಾಥುಲಾ ಗಡಿ ಪ್ರದೇಶದಲ್ಲಿ ಕಾವಲು ಕಾಯುತ್ತಿರುವುದು ಅಚ್ಚರಿಯೆನಿಸಿದರೂ ಸತ್ಯ ಸಂಗತಿಯಾಗಿದೆ. ಚೀನಾ ಸೈನಿಕರೂ ಸಹ ಇದನ್ನು ದೃಢಪಡಿಸಿ, ತಾವು ಆಶ್ವಾರೋಹಿ ಸೈನಿಕನೊಬ್ಬ ರಾತ್ರಿವೇಳೆ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಚಲಿಸುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಪಂಜಾಬಿನ ಕಪುರ್ತಲಾ ಬಳಿಯ ಹಳ್ಳಿಯೊಂದರಲ್ಲಿ ಜನಿಸಿದ ಹರ್ಭಜನ್ ಸಿಂಗ್, ಪಂಜಾಬ್ ಬೆಟಾಲಿಯನ್ ಸೇರಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಸಾಧಾರಣ ಸಿಪಾಯಿ. 1968ರಲ್ಲಿ ಸಿಕ್ಕಿಂ ಮತ್ತು ಉತ್ತರ ಬಂಗಾಳ ಗಡಿಭಾಗದಲ್ಲಿ  ನಡೆದ ನೈಸರ್ಗಿಕ ದುರಂತದಲ್ಲಿ ಸಾವನ್ನಪ್ಪಿದ ಹರ್ಭಜನ್ ಆಗಾಗ್ಗೆ ತನ್ನ ಸಹ ಸೈನಿಕರ ಸ್ವಪ್ನದಲ್ಲಿ ಕಾಣಿಸಿಕೊಂಡುಶತ್ರು ಸೈನಿಕರ ಚಲನವಲನಗಳನ್ನು, ಅಪಾಯಕಾರಿ ಚಟುವಟಿಕೆಗಳನ್ನು ವರದಿ ಮಾಡುತ್ತಾನಂತೆ. ಹೀಗಾಗಿ ಈತ ಭಾರತೀಯ ಸೈನಿಕರ ಆರಾಧ್ಯ ದೈವವಾಗಿದ್ದಾನೆ.  ಆತ ಮರಣಿಸಿದರೂ ಸಹ ಗೌರವ ಕ್ಯಾಪ್ಟನ್ ಹುದ್ದೆ ನೀಡಿ, ವೇತನ ನೀಡಲಾಗುತ್ತಿದೆ. ಅವನ ಸಮಾಧಿ ಸ್ಥಳದಲ್ಲಿ ಅಂದರೆ ಕುಪುಪ್‌ನಥಾಂಗ್ ಎನ್ನುವಲ್ಲಿ ಒಂದು ದೇವಾಲಯವನ್ನೇ ನಿರ್ಮಿಸಲಾಗಿದೆ. ಅಲ್ಲಿರುವ ಮೂರು ಕೋಣೆಗಳಲ್ಲಿ ಮಧ್ಯದ ಕೋಣೆಯಲ್ಲಿ ಬಾಬಾ ಹರ್ಭಜನ್ ಸಿಂಗ್‌ನ ಒಂದು ದೊಡ್ಡ ಭಾವಚಿತ್ರ ಮತ್ತು ಅದರ ಜೊತೆಗೆ ಸಿಖ್ ಗುರುಗಳ ಮತ್ತು ಹಿಂದು ದೇವರುಗಳ ಫೋಟೋಗಳನ್ನು ಇಡಲಾಗಿದೆ. ಅದರ ಬಲಭಾಗದ ಕೋಣೆಯಲ್ಲಿ ಹರ್ಭಜನ್ ಸಿಂಗ್‌ನ ಇಸ್ತ್ರಿ ಮಾಡಿದ ಸಮವಸ್ತ್ರಗಳು, ಪಾಲಿಷ್ ಹಾಕಿದ ಬೂಟುಗಳು, ನೀಟಾಗಿ ಹಾಸಿದ ಹಾಸಿಗೆ ಸಹಿತ ಮಂಚ, ಉಪಯೋಗಿಸುತ್ತಿದ್ದ ಪಾದರಕ್ಷೆಗಳನ್ನು ಸೊಗಸಾಗಿ ಜೋಡಿಸಿ ಇಡಲಾಗಿದೆ. ಅದರ ಎದುರಿನ ಕೋಣೆ ಕಚೇರಿ ಮತ್ತು ಉಗ್ರಾಣವಾಗಿ ಬಳಸಿಕೊಳ್ಳಲಾಗುತ್ತಿದೆ. ಅಲ್ಲಿ ನೀರಿನ ಬಾಟೆಲ್‌ಗಳು, ಟೂತ್ ಬ್ರಷ್ ಮತ್ತು ಪೇಸ್ಟ್, ಸೋಪು, ಮತ್ತಿತರ ದಿನಬಳಕೆಯ ವಸ್ತುಗಳನ್ನು ಇಡಲಾಗಿದೆ. ಇಲ್ಲಿಗೆ ಪ್ರತಿದಿನ ಸಹಸ್ರಾರು ಜನ ಸೈನಿಕರೂ ಭೇಟಿನೀಡಿ ತಮ್ಮ ಗೌರವ ಅರ್ಪಿಸುತ್ತಿದ್ದಾರೆ. ತಮ್ಮೆಲ್ಲ ಸಮಸ್ಯೆಗಳಿಗೆ ಸರಿಯಾದ ಪರಿಹಾರ ನೀಡುವನೆಂಬ ನಂಬಿಕೆ ಪ್ರಚಲಿತವಿದೆ. ಪ್ರತಿ ಭಾನುವಾರ ಮತ್ತು ಮಂಗಳವಾರ  ವಿಶೇಷ ಪೂಜಾಕಾರ್ಯಗಳು ಇಲ್ಲಿ ನಡೆಯುತ್ತಿದ್ದು ಅಂದು ದೇವಾಲಯಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಉಚಿತವಾಗಿ ಭೋಜನ ವ್ಯವಸ್ಥೆ ಇರುತ್ತದೆ. ಪ್ರತಿವರ್ಷ ಅಕ್ಟೋಬರ್ ನಾಲ್ಕರಂದು ಭಾರತೀಯ ಸೈನ್ಯದವರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಹರ್ಭಜನ್ ಸಿಂಗ್ ಮತ್ತು ಮಡಿದ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾರೆ. ಪ್ರತಿವರ್ಷ ಸೆಪ್ಟೆಂಬರ್ 15ರಿಂದ ನವಂಬರ್ ಹದಿನೈದರವರೆಗೆ ಹರ್ಭಜನ್ ಸಿಂಗ್‌ಗೆ ರಜೆ ನೀಡಲಾಗುವುದರಿಂದ ಆ ದಿನಗಳಲ್ಲಿ ಗಡಿ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ನೀಡಲಾಗುವುದು. ಸಿಕ್ಕಿಂ ಜನರಂತೂ ತಮ್ಮ ಆರಾಧ್ಯ ದೈವ ಕಾಂಚನಗಂಗಾ ನಂತರದ ಸ್ಥಾನವನ್ನು ಬಾಬಾ ಹರ್ಭಜನ್ ಸಿಂಗ್ ಅವರಿಗೆ ನೀಡಿದ್ದಾರೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!