ಸಂಪಾದಕೀಯ

ಗಾಂಧೀಜಿ ಮತ್ತು ಉಂಗುರ

ಗಾಂಧೀಜಿಯವರು ಖಾದಿ ನಿಧಿಗಾಗಿ ಹಣ ಸಂಗ್ರಹಿಸುತ್ತಿದ್ದರು. ಅದಕ್ಕಾಗಿ ಅವರು ತಮಗೆ ಅರ್ಪಿಸಿದ ಬಿನ್ನವತ್ತಳಿಕೆ, ಹಾರ, ನೆನಪಿನ ಕಾಣಿಕೆ, ಒಡವೆ ಮುಂತಾದವುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಖಾದಿ ನಿಧಿಗೆ ಸೇರಿಸುತ್ತಿದ್ದರು. ಅವರೊಮ್ಮೆ ಈಗಿನ ಶ್ರೀಲಂಕಾ ಅಂದರೆ ಸಿಲೋನಿಗೂ ಹೋಗಿದ್ದರು. ಅಲ್ಲಿ ಅವರ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದವರು ಎಸ್.ದುರೈರಾಜ್ ಸಿಂಗಂ ಎಂಬುವವರು. ಅವರಿಗೆ ಗಾಂಧೀಜಿಯವರನ್ನು ಕಂಡರೆ ಅಪಾರ ಭಕ್ತಿ ಮತ್ತು ಪ್ರೀತಿ. ಕೊಲೊಂಬೋದಲ್ಲಿ ನಡೆದ ಸಮಾರಂಭದಲ್ಲಿ ಸಿಂಗಂ ಅವರು ತಮ್ಮ ಬ್ಲಾಕ್ ಬರ್ಡ್ ಪೆನ್ನನ್ನು ಬಿಟ್ಟು ಹೋಗಿದ್ದರು. ಅದನ್ನು ಗಾಂಧೀಜಿಯವರು ಜೋಪಾನವಾಗಿ ತೆಗೆದಿಟ್ಟುಕೊಂಡು ಜಾಫ್ನಾಕ್ಕೆ ಹೋದಾಗ ಅವರಿಗೆ ವಾಪಸ್ಸು ಕೊಟ್ಟರು. ಅಂದಿನಿಂದ ಅದನ್ನು ಅವರು ಗಾಂಧೀಜಿಯವರ ನೆನಪಾಗಿ ಜೋಪಾನವಾಗಿ ಇಟ್ಟುಕೊಂಡಿದ್ದರು. 1927ರ ನವೆಂಬರ್ 27ರಂದು ಜಾಫ್ನಾದಲ್ಲಿ ನಡೆದ ಒಂದು ಸಮಾರಂಭದಲ್ಲಿ ಗಾಂಧೀಜಿಯವರ ಜೊತೆಗೆ ಸಿಂಗಂ ಅವರೂ ಇದ್ದರು. ಅಲ್ಲಿ ಸಿಂಗಂ ಅವರು ತಮ್ಮ ತಂದೆಯ ನೆನಪಾಗಿ ತಾವು ಧರಿಸಿದ್ದ ಉಂಗುರವನ್ನು ಖಾದಿ ನಿಧಿಗಾಗಿ ಗಾಂಧೀಜಿಯವರಿಗೆ ನೀಡಿದರು. ಅದನ್ನು ಹರಾಜು ಹಾಕಿದಾಗ ಸ್ವತಃ ಸಿಂಗಂ ಅವರೇ ಅದನ್ನು ಹರಾಜಿನಲ್ಲಿ ಹೆಚ್ಚಿನ ಹಣ ನೀಡಿ ತೆಗೆದುಕೊಂಡರು. ಮತ್ತೆ ಅದೇ ಉಂಗುರವನ್ನು ಪಡೆದ ಗಾಂಧೀಜಿ ಪುನಃ ಹರಾಜು ಹಾಕಿದಾಗ ಸಿಂಗಂ ಮತ್ತೆ ಕೊಂಡರು. ಮೂರನೇ ಬಾರಿಗೆ ಮತ್ತೆ ಪರೀಕ್ಷಿಸಬಾರದೆಂದು ಗಾಂಧೀಜಿ ಆ ಉಂಗುರವನ್ನು ಪಡೆಯಲಿಲ್ಲ. ಆ ಉಂಗುರಕ್ಕೆ ಸಿಂಗಂ  ಅವರು ಗಾಂಧೀಜಿಯವರ ಚಿತ್ರವನ್ನು ಎಂಬೋಸ್ ಮಾಡಿಸಿ ಅದನ್ನು ಸದಾ ಧರಿಸುತ್ತಿದ್ದರು. ಮುಂದೆ ಸಿಂಗಂ ಸಿಲೋನನ್ನು ತ್ಯಜಿಸಿ ಮಲಯಾದಲ್ಲಿ ನೆಲೆಸಿದರು. ಅಲ್ಲಿನ ಯುವತಿಯೊಬ್ಬಳು ತನ್ನ ನಿಶ್ಚಿತಾರ್ಥದ ಉಂಗುರವನ್ನು ಸಿಂಗಂ ಅವರಿಗೆ ನೀಡಿ ಅದನ್ನು ಗಾಂಧೀಜಿಯವರಿಗೆ ತಲುಪಿಸಲು ಕೋರಿದಳು. ಅವರು ಅದೇ ರೀತಿ ಮಾಡಿದಾಗ ಗಾಂಧೀಜಿಯವರು ಸಿಂಗಂ ಅವರಿಗೆ ಮೆಚ್ಚುಗೆಯ ಪತ್ರವನ್ನು ಬರೆದರು. ಹೀಗಾಗಿ ಸಿಂಗಂ ಕೊನೆಯವರೆಗೂ ಆ ಪತ್ರ, ಉಂಗುರ ಮತ್ತು ಪೆನ್ನನ್ನು ಗಾಂಧೀಜಿಯವರ ನೆನಪಾಗಿ ಜೋಪಾನವಾಗಿ ಇಟ್ಟುಕೊಂಡಿದ್ದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ 1941 ರಲ್ಲಿ ಜಪಾನ್ ಮಲಯಾವನ್ನು ಆಕ್ರಮಿಸಿತು. ಜಪಾನ್ ಸೈನಿಕರಲ್ಲಿ ಕೆಲವರು ಲೂಟಿಮಾಡಲು ಪ್ರಾರಂಭಿಸಿದರು. ಹಾಗೆಯೇ ಸಿಂಗಂ ಅವರ ಬಳಿ ಬಂದ ಸ್ಯೆನಿಕನೊಬ್ಬ ಸಿಂಗಂ ಬಳಿಯಿದ್ದ ಪೆನ್ನು, ಹಣ, ಒಡವೆಗಳನ್ನು ಕಿತ್ತುಕೊಂಡ. ಉಂಗುರವನ್ನೂ ನೀಡಲು ಆದೇಶಿಸಿದ. ಆಗ ಸಿಂಗಂ ಬೇರೆ ದಾರಿಕಾಣದೆ ತಮ್ಮ ಉಂಗುರವನ್ನು ತೆಗೆದು ಸೈನಿಕನ ಕೈಗಿತ್ತರು. ಆ ಉಂಗುರವನ್ನು ಕೈಲಿ ಹಿಡಿದು ನೋಡಿದ ಸೈನಿಕ, ಅದರ ಮೇಲೆ ಗಾಂಧೀಜಿಯವರ ಎಂಬೋಸ್ ಆಗಿದ್ದ ಚಿತ್ರವನ್ನು ನೋಡಿ, "ಆಹ್ ಗಾಂಧೀಜಿ ಇಂಡಿಯಾ" ಎಂದು ಹೇಳಿ ಸಿಂಗಂ ಅವರಿಗೇ ಮರಳಿಸಿದ. ಆ ಧೂರ್ತ ಸಿಪಾಯಿಯೂ ಸಹ ಗಾಂಧೀಜಿಯ ಪ್ರಭಾವಕ್ಕೆ ಒಳಪಟ್ಟಿದ್ದನ್ನು ನೋಡಿ ಸಿಂಗಂ ಅವರಿಗೆ ಅತೀವ ಆನಂದವಾಯಿತು. ಆ ಉಂಗುರವನ್ನು ಕೊನೆಯವರೆಗೂ ಒಂದು ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡು ಬಂದರು.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!