ಸಿಖ್ ಧರ್ಮಗುರು ಗುರುನಾನಕರು ಪ್ರೀತಿ, ಕರುಣೆ ಮತ್ತು ಸಜ್ಜನಿಕೆಗೆ ಹೆಸರಾದವರು. ದೀನ ದಲಿತರ ಬಗ್ಗೆ ಅಪಾರ ಆಸ್ಥೆಯನ್ನು ಹೊಂದಿದವರು. ಒಮ್ಮೆ ಅವರ ತಂದೆ ಅವರ ಕೈಗೆ ಇಪ್ಪತ್ತು ರುಪಾಯಿಗಳನ್ನಿತ್ತು ಇದನ್ನು ಬಂಡವಾಳವನ್ನಾಗಿಟ್ಟುಕೊಂಡು ವ್ಯಾಪಾರ ಮಾಡು ಎಂದು ಆದೇಶಿಸಿದರು. ಆದರೆ ಆ ಹಣದಿಂದ ನಾನಕರು ಸನ್ಯಾಸಿಗಳಿಗೆ ಆಹಾರ ಕೊಂಡು ತಂದು ನೀಡಿದರು. ತಂದೆ ಕೇಳಿದಾಗ ಅದಕ್ಕಿಂತ ಲಾಭದಾಯಕ ವ್ಯವಹಾರ ತನಗೆ ಕಾಣಲಿಲ್ಲವೆಂದು ಉತ್ತರಿಸಿದರು. ಅದೇ ರೀತಿ ಶ್ರೀಮಂತರ ಬಗ್ಗೆ ಅವರಿಗೆ ಯಾವ ವಿಶೇಷವಾದ ಒಲವೂ ಇರಲಿಲ್ಲ. ಅವರು ಲಾಹೋರ್ನದಲ್ಲಿದ್ದಾಗ ಧುನೀಚಂದನೆಂಬ ಶ್ರೀಮಂತ ತನ್ನಲ್ಲಿ ಅದೆಷ್ಟು ಐಶ್ವರ್ಯವಿದೆ ಎಂದು ಎಲ್ಲರಿಗೂ ಗೊತ್ತಾಗಲೆಂದು ಮನೆಯ ಮುಂದೆ ಅನೇಕ ಬಾವುಟಗಳನ್ನು ನೆಟ್ಟಿದ್ದನು. ಒಂದೊಂದು ಬಾವುಟವೂ ಅವನಲ್ಲಿದ್ದ ಒಂದು ಲಕ್ಷಕ್ಕೆ ಸಮ ಎಂದು ಜನ ತಿಳಿಯಲೆಂದು ಹಾಗೆ ಮಾಡಿದ್ದ. ಅವನ ಐಶ್ವರ್ಯದಿಂದಾಗಿ ಜನ ಅವನಿಗೆ ಗೌರವ ನೀಡುತ್ತಿದ್ದರು. ಧುನೀಚಂದನಿಗೆ ಗುರುನಾನಕರನ್ನು ತನ್ನ ಮನೆಗೆ ಕರೆಯಿಸಿ, ಸತ್ಕರಿಸಬೇಕೆಂಬ ಆಸೆ ಬಂತು. ಅವನು ಗುರುನಾನಕರ ಬಳಿ ಹೋಗಿ ತನ್ನ ತಂದೆಯ ಸ್ಮರಣಾರ್ಥ ಒಂದು ಔತಣಕೂಟನ್ನು ಏರ್ಪಡಿಸಲಾಗಿದೆಯೆಂದೂ, ಅದಕ್ಕಾಗಿ ಗುರುನಾನಕರು ಆಗಮಿಸಿ ಔತಣ ಕೂಟದಲ್ಲಿ ಭಾಗವಹಿಸಿ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡ. ಒಂದು ಕ್ಷಣ ಗುರುನಾನಕರು ಸುಮ್ಮನಿದ್ದು ಅವನಿಗೆ ಹೇಳಿದರು, "ನೀನು ನನ್ನ ಒಂದು ಷರತ್ತಿಗೆ ಒಪ್ಪಿದರೆ ಮಾತ್ರ ನಿನ್ನ ಮನೆಗೆ ಬರುತ್ತೇನೆ". ಅದಕ್ಕೆ ಧುನೀಚಂದ್ ಒಪ್ಪಿದ. ಆಗ ನಾನಕರು ತಮ್ಮ ಬಳಿ ಒಂದು ಸೂಜಿ ತುಂಬಾ ದಿನದಿಂದ ಇರುವುದಾಗಿಯೂ, ಅದನ್ನೀಗ ಪಡೆದು ಅದೇ ಸೂಜಿಯನ್ನು ಮುಂದಿನ ಜನ್ಮದಲ್ಲಿ ತಮಗೆ ತಲುಪಿಸುವ ಆಶ್ವಾಸನೆಯನ್ನು ನೀಡಿದರೆ ಮಾತ್ರ ಅವನ ಮನೆಗೆ ಬರುವುದಾಗಿ ಹೇಳಿದರು. ಅದಕ್ಕೆ ಧುನೀಚಂದ್, ಅದು ಹೇಗೆ ಸಾದ್ಯ ಈ ಪ್ರಪಂಚವನ್ನು ಬಿಡುವಾಗ ಏನನ್ನಾದರೂ ಒಯ್ಯಲು ಸಾಧ್ಯವೆ ಎಂದು ಮರು ಪ್ರಶ್ನಿಸಿದ. ಆಗ ಶಾಂತ ಚಿತ್ತದಿಂದ ನಾನಕರು ಹೇಳಿದ ಮಾತು ಎಲ್ಲರಿಗೂ ಎಲ್ಲಾ ಕಾಲಕ್ಕೂ ಅನ್ವಯಿಸುವಂತಹುದು. ಅವರು ಹೇಳುತ್ತಾರೆ, "ಸಾಯುವಾಗ ಮುಂದಿನ ಜನ್ಮಕ್ಕೆ ಏನನ್ನೂ ಕಡೆಗೆ ಒಂದು ಸೂಜಿಯನ್ನೂ ಕೊಂಡೊಯ್ಯಲು ಸಾಧ್ಯವಿಲ್ಲದಿದ್ದರೆ ಧುನಿಚಂದ್ ತನ್ನ ಮನೆಯ ಮುಂದೆ ತನ್ನ ಐಶ್ವರ್ಯ ಪ್ರದರ್ಶಿಸುವುದು ಅದೆಷ್ಟು ಉಚಿತ?" ಎಂದು. ಆಗ ಆ ಶ್ರೀಮಂತನಿಗೆ ನಾಚಿಕೆಯಾಯಿತು. ಗುರುಗಳು ಹೇಳಿದ್ದು ಅದೆಷ್ಟು ಸಮಂಜಸ ಎಂದು ಅರ್ಥವಾಯಿತು. ನಂತರ ಗುರುಗಳ ಆದೇಶದಂತೆ ಅವನು ತನ್ನಲ್ಲಿರುವ ಐಶ್ವರ್ಯವನ್ನೆಲ್ಲಾ ಬಡಬಗ್ಗರಿಗೆ ಹಂಚಿ ಇಡೀ ಜೀವನವನ್ನು ಭಗವಂತನ ಮತ್ತು ದೀನ ದಲಿತರ ಸೇವೆಯಲ್ಲಿ ಕಳೆದನು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com