ಸಂಪಾದಕೀಯ

ಅಡಕೆ ಬೆಲೆ: ಖುಷಿಯೋ, ಆತಂಕವೋ?

ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಕಾಲ ಹೋಯಿತು. ಈಗ ಅಡಕೆಗೆ ಬಂದ ಮಾನ ಆನೆ ಕೊಟ್ಟರೂ ಬಾರದು ಎನ್ನುವಂತಾಗಿದೆ. ಕೇವಲ ಎರಡು -ಮೂರು ತಿಂಗಳ ಹಿಂದಷ್ಟೇ ಇಪ್ಪತ್ತೈದು ಸಾವಿರದ ಆಸುಪಾಸಿನಲ್ಲಿದ್ದ ಅಡಕೆ ದರ ಎಂಬತ್ತನ್ನೂ ದಾಟಿ ಲಕ್ಷದೆಡೆಗೂ ದಾಪುಗಾಲು ಹಾಕುತ್ತಿದೆ. ಕಳೆದ ವರ್ಷ ನಿಷೇಧದ ಭೀತಿಯಲ್ಲಿ ಕಳವಳಗೊಂಡಿದ್ದ ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಜೊತೆಗೆ ಈ ದರ ಏರುವುದಕ್ಕೆ ನಾವೇ ಕಾರಣರು ಎಂದು ರಾಜಕೀಯ ವಲಯದಲ್ಲಿ ಹೊಯ್‌ಕೈ ಕೂಡಾ ಆರಂಭವಾಗಿದೆ.
ಕೆಲವು ವರದಿಗಳ ಪ್ರಕಾರ ಇದರ ಲಾಭ ಸುಮಾರು ಶೇ. ಇಪ್ಪತ್ತರಷ್ಟು ರೈತರು ಪಡೆದುಕೊಂಡಿರಬಹುದಷ್ಟೇ. ಮಂಡಿ ಮಾಲೀಕರೇ ಹೆಚ್ಚಿನ ಲಾಭ ಮಾಡಿಕೊಂಡಿರುವ ಸಂಭವ ಉಂಟು. ಏಕೆಂದರೆ ಬಹುಪಾಲು ರೈತರ ಬಳಿ ಮಾಲೇ ಇಲ್ಲ. ಈ ಹಂಗಾಮಿನ ಬೆಳೆ ಇನ್ನೂ ಬರಬೇಕು. ಕಳೆದ ಬಾರಿಯೂ ಅತಿವೃಷ್ಟಿಯಿಂದಾಗಿ, ಕೊಳೆರೋಗದಿಂದಾಗಿ ಬೆಳೆ ನಷ್ಟವಾಗಿದ್ದೂ ಉಂಟು. ಇರಲಿ. ಬಹು ದಿನಗಳ ನಂತರ ಒಳ್ಳೆಯ ಬೆಲೆ ಬಂದಿದೆ, ಬೆಳೆ ಬೆಳೆದ ರೈತ ಒಳ್ಳೆಯ ಬೆಲೆ ಸಿಕ್ಕಿ ಸಂತೋಷವಾಗಿರಲಿ. ಆದರೆ ಈ ಬೆಲೆ ಹೆಚ್ಚಳದ ಇನ್ನೊಂದು ಮುಖವನ್ನೂ ಅಭ್ಯಸಿಸಬೇಕು. ಒಮ್ಮೆಲೆ ಈ ಪರಿಯ ಬೆಲೆಯ ಹೆಚ್ಚಳ ರೈತರಿಗೆ ನೆಮ್ಮದಿ ತಂದೀತೇ? ಮುಂದೆ ಮಾರುಕಟ್ಟೆಗೆ ಒಮ್ಮೆಲೆ ಸರಕು ಬಂದಲ್ಲಿ ಬೆಲೆ ಕುಸಿತ ಉಂಟಾಗದೇ? ಇದು ಬೇಡಿಕೆ ಹೆಚ್ಚಳದಿಂದ ಉಂಟಾದ ಬೆಲೆ ಹೆಚ್ಚಳವಲ್ಲ, ಬದಲಾಗಿ ಪೂರೈಕೆ ಕಡಿಮೆಯಾಗಿರುವುದರಿಂದ ಹಾಗೂ ಗುಟ್ಕಾ ಕಂಪನಿ ಮಾಲೀಕರು ಮುಂದಿನ ಲಾಭದ ನಿರೀಕ್ಷೆಯಲ್ಲಿ ನಡೆದಿರಬಹುದಾದ ಬೆಳವಣಿಗೆ ಇರಬಹುದು. ಇದರ ದೂರಗಾಮಿ ಪರಿಣಾಮಗಳು ಎಲ್ಲವೂ ಸಂತಸ ತರಲಿಕ್ಕಿಲ್ಲ. ಉದಾ: ಖೇಣಿ ಹಿಡಿಯುವವರು (ಕೊಯ್ಲು ಮತ್ತು ಸಂಸ್ಕರಣೆಯ ಗುತ್ತಿಗೆ) ಯಾವ ಅಂದಾಜಿನ ಮೇಲೆ ಒಪ್ಪಂದ ಮಾಡಿಕೊಳ್ಳಬಹುದು? ಒಂದು ವೇಳೆ ತೀವ್ರ ಬೆಲೆ ಕುಸಿತ ಉಂಟಾದಲ್ಲಿ ಅವರ ಪಾಡೇನು? ಈ ಬೆಲೆಯನ್ನು ನಂಬಿ ಮುಂದಿನ ಹಂಗಾಮಿನ ಫಸಲಿನ ನಿರೀಕ್ಷೆ ಸಿಕ್ಕಾಪಟ್ಟೆ ಸಾಲ- ಸೋಲ ಮಾಡಿಕೊಳ್ಳುವವರ ಗತಿ ಏನು? ಈ ಬೆಲೆ ಆಧಾರದ ಮೇಲೆ ಮುಂಬರುವ ಕೊಯ್ಲಿನ ಸಮಯದಲ್ಲಿನ ಕೂಲಿ ದರಗಳು ಇನ್ನಷ್ಟು ದುಬಾರಿಯಾಗಿ ಅದರ ಪರಿಣಾಮಗಳು ಉಳಿದ ರೈತರಿಗೂ ತಟ್ಟಬಹುದಲ್ಲವೇ? ಮಲೆನಾಡಿನ ಸಣ್ಣ ಸಣ್ಣ ಗ್ರಾಮಗಳಲ್ಲಿ ನಾಲ್ಕೈದು ಕ್ವಿಂಟಾಲ್ ಅಡಕೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಸಮಸ್ಯೆ ಆಗಲಾರದೇ? ಮೊದಲೇ ನಕ್ಸಲೀಯರಂಥ ಸಮಾಜ ವಿರೋಧಿ ಶಕ್ತಿಗಳ ದಾಳಿಗೆ ಸಿಕ್ಕಿರುವ ಹಳ್ಳಿಗಳು ದರೋಡೆಗಾರರಿಗೂ ಸುಲಭ ತುತ್ತಾಗಲಾರವೇ? ಬೆಲೆ ಕುಸಿದಾಗ ಬೆಂಬಲ ಬೆಲೆಗೆ ಆಗ್ರಹಿಸುವ ರೈತ ಸಂಘಟನೆಗಳ ನಿಲುವು ಈಗ ಹೇಗಿರುತ್ತದೆ? ಕೃಷಿಯನ್ನೇ ತೊರೆದು ನಗರಮುಖಿಯಾಗುತ್ತಿದ್ದ ರೈತವರ್ಗ ಮತ್ತೆ ಹಳ್ಳಿಗೆ ಮರಳೀತೇ? ಸರ್ಕಾರದಿಂದ ಮತ್ತೊಮ್ಮೆ ಸಾಲ ಮನ್ನಾದ ನಿರೀಕ್ಷೆಯಲ್ಲಿ ನಿರುತ್ಪಾದಕವಾಗಿರುವ ಬ್ಯಾಂಕು ಸಾಲಗಳು ವಸೂಲಾಗಬಲ್ಲವೇ? ಮದುವೆಯಾಗದೇ ಪರದಾಡುತ್ತಿರುವ ಮಲೆನಾಡ ಗಂಡು ಮಕ್ಕಳಿಗೆ ಇನ್ನಾದರೂ ಹೆಣ್ಣುಗಳು ದೊರಕಿಯಾವೆ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಈ ಬೆಳವಣಿಗೆ ಹುಟ್ಟು ಹಾಕಿದೆ.
- ಅ.ಸು.ರವೀಂದ್ರ, ಶಿವಮೊಗ್ಗ  

ಒಳ್ಳೆಯ ದಿನಗಳು ಬರಬೇಕಾದರೆ.,

ಉದ್ಯಮಿ ಅನಿಲ್ ಚಳಗೇರಿಯವರು ಬರೆದ ಲೇಖನ (ಕ.ಪ್ರ. 23/6) ವನ್ನು, ಪ್ರಕೃತದ ಬೆಲೆ ಏರಿಕೆ ವಿದ್ಯಮಾನಗಳನ್ನು ಮೋದಿಯವರ ಆಡಳಿತ ವೈಫಲ್ಯವೆಂದು ಪ್ರತಿಪಾದಿಸುವವರು ಓದುವುದು ಸೂಕ್ತವಾಗಿದೆ. ವಿಷಾದವೆಂದರೆ ವಿರೋಧಿಸುವುದಕ್ಕೋಸ್ಕರವೇ -ಪ್ರತಿಭಟಿಸುವವರಿಗೆ ಈ ಅಭಿಪ್ರಾಯ ರುಚಿಸಲಾರದು. ಇನ್ನು 5 ವರ್ಷ ಯಾವೊಂದೂ ಅಗತ್ಯ ವಸ್ತುವಿನ ಬೆಲೆ ಏರಲೇ ಕೂಡದೆಂದು ಪಟ್ಟು ಹಿಡಿದು ಪ್ರತಿಭಟಿಸುತ್ತಾ ಈ ಮಂದಿ ಬೀದಿಗಿಳಿಯುವರು ಖಂಡಿತ. ಪರಿಸ್ಥಿತಿಯ ಅಧ್ಯಯನ, ವ್ಯವದಾನ ಅವರಲ್ಲಿಲ್ಲ. ಸೀದು ಹೋದ ದೇಶದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರಲು ಕನಿಷ್ಠ ಒಂದು ವರ್ಷ ಅವಧಿಯನ್ನಾದರೂ ಮೋದಿಗೆ ನೀಡಿ. ಇರಾಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗಾಗಿರುವ ಆಘಾತವನ್ನು ಪರಾಂಬರಿಸಿ. ರೋಗಿಯನ್ನು ಐ.ಸಿ. ಯೂನಿಟ್‌ಗೆ ಸೇರ್ಪಡೆ ಮಾಡಿದ ಮರುದಿನವೇ ಆತ ಎದ್ದು ಓಡಾಡಬೇಕೆಂದು ಆಗ್ರಹಿಸಬೇಡಿ. ಆತನಿಗೂ 'ಒಳ್ಳೆಯ ದಿನಗಳು ಬಂದೇ ಬರುತ್ತವೆ.' ಕೆಲವು ದಿನಗಳಲ್ಲಿ ಕಾದು ನೋಡಿ. ಇಷ್ಟೊಂದು ಅವಸರ ಯಾರಿಗೂ ತರವಲ್ಲ. ಆಗ ಆಧಾರ್‌ನಲ್ಲಿ ಮುಳುಗಿ ಸಾವಿರಾರು ಕೋಟಿ ನೀರಲ್ಲಿ ಕೊಚ್ಕೊಂಡು ಹೋಗುವಾಗ ಗೋಡಿಯೂ ಗೋಡದಂತೆ... ಮುಖ ಮುಚ್ಕೊಂಡು ಕೂತಿದ್ದ ಈ ಮಂದಿ, ಈಗ ಮೋದಿಯವರು ದೇಶದ ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಅನಿವಾರ್ಯವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಾಗ ಇನ್ನಿಲ್ಲದಂತೆ ಹುಯಿಲಿಡುವುದೇಕೆ? ಮೋದಿಯವರು ಕೇಂದ್ರದಲ್ಲಿ ಭಾಗ್ಯಗಳ ಸರಣಿಯನ್ನು ತಂದಿಕ್ಕಿ, ಜನರ ತುಟಿಗೆ ತುಪ್ಪ ಹಚ್ಚಿ, ಈಗಾಗಲೇ ಬಾಗಿ ಬೆಂಡಾದ ದೇಶದ ಆರ್ಥಿಕತೆಯ ಬೆನ್ನೆಲುಬು ಇನ್ನಷ್ಟು ಬಾಗುವುದನ್ನು ಕಾಣುವ ಬಯಕೆ ಈ ಮಂದಿಯದೆ?
-ಎನ್.ಡಿ. ಕಾರಂತ, ಮೈಸೂರು

ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ