ಜೈಸಲ್ಮೇರ್‌ನ ರಾಜನಾಗಿದ್ದ ರತನ್ ಸಿಂಗ್ ಪರಾಕ್ರಮಿಯಾಗಿದ್ದ. ಕ್ರಿ.ಶ.1302- 03 ರಲ್ಲಿ ಸಿಂಹಾಸನವನ್ನೇರಿದ ರತನ್ ಸಿಂಗ್ ರಾಜ್ಯದ ಮೇಲೆ ಅಲ್ಲಾವುದ್ದೀನ್ ಖಿಲ್ಜಿಯ ಸೇನಾಪತಿ ಮಲ್ಲಿಕಾಫರ್ ದಂಡೆತ್ತಿಬಂದ. ಆತನ ಸೇನೆ ಕೋಟೆಯ ಸುತ್ತಲೂ ಬೀಡು ಬಿಟ್ಟಿತು. ರತನ್ ಸಿಂಗ್‌ನ ಪುತ್ರಿ ರತ್ನಾವಳಿ ಜೈಸಲ್ಮೇರ್ ಸೈನ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಳು. ಒಂದು ರಾತ್ರಿ ಮಲ್ಲಿಕಾಫರ್ ಮತ್ತವನ ಸೈನ್ಯದ ಕೆಲವು ಸೈನಿಕರು ಕೋಟೆಯ ಗೋಡೆ ಹತ್ತಿ ಒಳಭಾಗಕ್ಕೆ ಧುಮುಕಿದರು. ಆದರೆ ಅಲ್ಲಿಯೇ ಪಹರೆ ಕಾಯುತ್ತಿದ್ದ ರಜಪೂತ್ ಸೈನಿಕರು ವೀರಾವೇಶದಿಂದ ಹೋರಾಡಿ ಅನೇಕ ಶತ್ರು ಸೈನಿಕರನ್ನು ಕೊಂದರು. ಮಲ್ಲಿಕಾಫರ್ ಹೇಗೋ ತಪ್ಪಿಸಿಕೊಂಡು ಓಡಿ ಹೋದ. ಆದರೆ ಅವನ ಪ್ರಯತ್ನ ಮಾತ್ರ ನಿಲ್ಲಲಿಲ್ಲ. ಕೋಟೆಯ ಒಳ ಹೋಗಲು ಕಳ್ಳದಾರಿಯನ್ನು ತೋರಿಸಲು ಒಬ್ಬ ರಜಪೂತ್ ಮುದುಕನಿಗೆ ಹಣದ ಆಸೆ ತೋರಿಸಿದ. ಒಂದು ಥೈಲಿಯ ತುಂಬ ಬಂಗಾರದ ನಾಣ್ಯಗಳನ್ನು ತುಂಬಿ ಅವನ ಕೈಗಿಕ್ಕಿ ತನ್ನ ಸೈನ್ಯ ಒಳಹೋಗುವ ಮಾರ್ಗ ತೋರಿಸಬೇಕೆಂದು ಕೇಳಿದ. ಅದರಂತೆ ಆ ವೃದ್ಧ ಒಂದು ರಾತ್ರಿ ಮಲ್ಲಿಕಾಫರನ ಒಂದು ತುಕುಡಿಯನ್ನು ತನ್ನೊಡನೆ ಕರೆದೊಯ್ದು ಸರಿ ಸಮಯಕ್ಕಾಗಿ ಕಾದು ನಿಂತ. ರತನ್ ಸಿಂಗ್‌ನ ಕೋಟ್ಯೊಳಗೆ ಕರೆದೊಯ್ದು ಮದ್ದು ಗುಂಡಿನ ಸಂಗ್ರಹ ತೋರಿಸಲು ಮಲ್ಲಿಕಾಫರ್ ಇನ್ನೂ ಐದು ಸಹಸ್ರ ಚಿನ್ನದ ನಾಣ್ಯಗಳನ್ನು ಆ ವೃದ್ಧನಿಗೆ ನೀಡಿದ. ಅದರಂತೆ ಅಂದು ಮಧ್ಯರಾತ್ರಿ ಕೋಟೆಯ ಒಳಹೋಗುವ ಕಳ್ಳದಾರಿಯನ್ನು ತೋರಿಸಲು ಆ ವೃದ್ಧ ಒಪ್ಪಿಕೊಂಡ. ಆ ದಿನ ಕರಾಳ ರಾತ್ರಿಯಲ್ಲಿ ಕಳ್ಳ ಕಿಂಡಿಯೊಳಗಿಂದ ಮಲ್ಲಿಕಾಫರನ ಸೈನ್ಯದ ತುಕಡಿಯೊಂದನ್ನು ತನ್ನ ಜೊತೆಗೆ ಕರೆದೊಯ್ದು, ನಂತರ ಆ ಕಿಂಡಿಯನ್ನು ಮುಚ್ಚಿದ. ನಿಧಾನವಾಗಿ ತಾನು ಮುಂದೆ ಮುಂದೆ ಹೋಗಿ ಒಂದೆಡೆ ನಿಂತು ಸೈನ್ಯಕ್ಕೆ ಮುನ್ನಡೆಯಲು ತಿಳಿಸಿದ. ಹರ್ಷದಿಂದ ಉಬ್ಬಿದ ಸೈನಿಕರೆಲ್ಲಾ ಕೈಯಲ್ಲಿ ಕತ್ತಿ ಹಿಡಿದು ಮುನ್ನುಗ್ಗಿದರು. ಮುಂದೆ ಒಂದು ಆಳವಾದ ಖೆಡ್ಡಾ ತೋಡಲಾಗಿತ್ತು. ಅದರಲ್ಲಿ ಎಲ್ಲ ಸೈನಿಕರೂ ಬಿದ್ದು ಕೈಕಾಲು ಮುರಿದುಕೊಂಡು ಗಾಯಗೊಂಡರು. ಅವರಿಗೆ ಆ ಗುಂಡಿಯಿಂದ ಮೇಲೇರಿಬರಲಾಗಲೇ ಇಲ್ಲ. ಆಗ ರತ್ನಾವಳಿಯು ಆ ಖೆಡ್ಡಾದ ಅಂಚಿನ ಮೇಲೆ ನಿಂತು ಹೇಳಿದಳು, "ಅಲ್ಲಾವುದ್ದೀನನ ಕುನ್ನಿಗಳೇ ಇಲ್ಲಿ ಕೇಳಿ, ರಜಪೂತರೆಂದೂ ದೇಶದ್ರೋಹ ಮಾಡುವುದಿಲ್ಲ. ಇಂದು ನೀವೆಲ್ಲಾ ನಮ್ಮ ಬಂಧಿಯಾಗಿದ್ದೀರಿ".
ಇದು ಆ ವೃದ್ಧನೇ ರಾಜಕುಮಾರಿ ರತ್ನಾವಳಿಯ ಸಲಹೆಯಂತೆ ರೂಪಿಸಿದ ಸಂಚಾಗಿತ್ತು!
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com