ಶಿಕಾರಿಪುರದಿಂದ ಆರ್.ಸಿ. ಪರಶುರಾಮ ಅವರು ಬರೆಯುತ್ತಾರೆ- 'ಜೂ.7ರ ಕ.ಪ್ರ. ಶಿವಮೊಗ್ಗ ಆವೃತ್ತಿಯ ಪುಟ 3ರಲ್ಲಿ 'ಚೆಸ್ ತರಬೇತಿ' ಎಂಬ ಶೀರ್ಷಿಕೆಯನ್ನು ನೀಡಿದ್ದೀರಿ. ಆದರೆ ಸುದ್ದಿಯ ವಿಶ್ಲೇಷಣೆಯಲ್ಲಿ ಚೆಸ್ಗೆ ಸಂಬಂಧಪಟ್ಟ ಯಾವುದೇ ವಿಷಯಗಳಿಲ್ಲ. ಬದಲಾಗಿ ಸುದ್ದಿಯಲ್ಲಿ ಮೋದಿಯವರ ರಾಜಕೀಯ ಆರೋಪಗಳು ಮತ್ತು ಅವರು ಅದನ್ನು ಎದುರಿಸಿದ ರೀತಿಯ ವಿಶ್ಲೇಷಣೆ ನೀಡಿದ್ದೀರಿ. ಈ ವಿಶ್ಲೇಷಣೆ ಸಹ ಇದು ಪತ್ರಿಕೆಯ ಅಭಿಪ್ರಾಯವೋ ಅಥವಾ ಯಾರಾದರೂ ನೀಡಿದ ಹೇಳಿಕೆಯೋ ಎಂಬುದು ತಿಳಿಯದೇ ಗೊಂದಲವಾಗಿದೆ.'
'ಇದೇ ಪುಟದಲ್ಲಿ 'ರೈಲು ರಾಣೆಬೆನ್ನೂರಿಗೆ ಬೇಡ ಹಾನಗಲ್ಗೆ ಹೋಗಲಿ' ಎಂಬ ಸುದ್ದಿಯಲ್ಲಿನ ಮೂರನೇ ಪ್ಯಾರಾದಲ್ಲಿ ಮಾಜಿ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಭೇಟಿಯಾಗಿ ಹಲವು ಮುಂಬರುವ ರೈಲ್ವೆ ಆಯವ್ಯಯದಲ್ಲಿ ಎಂದಿದೆ. ಈ ಸಾಲಿನಲ್ಲಿ ಹಲವು ಎಂಬ ಪದವು ಅನವಶ್ಯಕವಾಗಿ ಬಂದು ಕುಳಿತಿದೆ.'
'ಜೂ.15ರ ಕ.ಪ್ರ. ಶಿವಮೊಗ್ಗ ಆವೃತ್ತಿಯ ಪುಟ 3ರಲ್ಲಿ 'ಸಾಮಾಜಿಕ ಪಿಡುಗು ನಿವಾರಣೆಗೆ ರಾಜ್ಯದ ಯುವಜನತೆ ಮುಂದಾಗಲಿ' ಎಂಬ ಶೀರ್ಷಿಕೆ ಇದೆ. ಆದರೆ ಈ ಸುದ್ದಿಯ ವಿಶ್ಲೇಷಣೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಸೇವಾ ಶಿಬಿರದ ಬಗ್ಗೆ ಮಾತನಾಡಿದ ಯಾವ ಗಣ್ಯರೂ ಸಾಮಾಜಿಕ ಪಿಡುಗು ನಿವಾರಣೆಗೆ ಯುವ ಜನತೆ ಮುಂದಾಗಲಿ ಎಂದು ಹೇಳಿಲ್ಲ. ಹೀಗಾಗಿ ಶೀರ್ಷಿಕೆಗೂ ಸುದ್ದಿ ವಿಶ್ಲೇಷಣೆಗೂ ಹೊಂದಿಕೆಯಾಗಲ್ಲ.'
'ಪುಟ 6ರಲ್ಲಿ ನಿಮ್ಮ 'ನಂಗೆ ಇಷ್ಟಾನೋ' ಲೇಖನದಲ್ಲಿ 'ವಿಶಿಷ್ಟ ಪುಸ್ತಕದ ಅಂಗಡಿ' ವಿಷಯದ ಮೊದಲನೇ ಪ್ಯಾರಾದ ಕೊನೆಯಲ್ಲಿ 'ಆ ಅಂಗಡಿಗೆ ಬರುವವರು ಯಾರೂ ಬರಿಗೈಲಿ ಹೋಗುವುದಿಲ್ಲ, ನೂರಾರು ಕೃತಿಗಳನ್ನು ಖರೀದಿಸುವವರೇನೂ ಕಮ್ಮಿ ಇಲ್ಲ' ಎಂದಿದೆ. ಇದರಲ್ಲಿ ಖರೀದಿಸುವವರೇನು ಕಮ್ಮಿ ಇಲ್ಲ ಎನ್ನುವುದು ಖರೀದಿಸುವವರ ಅಂತಸ್ತು ಅಥವಾ ಅವರ ಘನತೆಯ ಬಗ್ಗೆ ತಿಳಿಸಿದಂತಾಗುತ್ತದೆ. ಆದರೆ ಲೇಖನದಲ್ಲಿ ನಿಮ್ಮ ಉದ್ದೇಶ ನೂರಾರು ಕೃತಿಗಳನ್ನು ಖರೀದಿಸುವವರ ಸಂಖ್ಯೆಯನ್ನು ತಿಳಿಸುವುದಾದ್ದರಿಂದ ಇದರಲ್ಲಿ 'ಖರೀದಿಸುವವರೇನು ಕಮ್ಮಿ ಇಲ್ಲ' ಎಂಬುದು ಖರೀದಿಸುವವರಿಗೇನು ಕಮ್ಮಿ ಇಲ್ಲ ಎಂದಿದ್ದರೆ ಸೂಕ್ತವಾಗಿರುತ್ತಿತ್ತು' ಎಂದಿದ್ದಾರೆ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆಯುತ್ತಾರೆ- 'ಜೂ.9ರ ಸಂಚಿಕೆ ಪುಟ 7ರಲ್ಲಿ ಐಐಟಿ ವ್ಯಾಮೋಹಕ್ಕೆ 'ಹಾಲೆರೆಯುವ ಮುನ್ನ' ಶೀರ್ಷಿಕೆಯಲ್ಲಿ ಈಗ ಮತ್ತೆ ಹೊಸ 8 ಐಐಟಿಗಳು ತಲೆಯೆತ್ತಿದರೆ ಅವುಗಳಿಗೆ ಇನ್ನೊಂದು 'ಪಂಚವಾರ್ಷಕ' ಯೋಜನೆಯಲ್ಲಿ ಮತ್ತೆ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಬೇಕಾಗಬಹುದು ಎಂದಿದೆ. ಅದು 'ಪಂಚವಾರ್ಷಿಕ' ಎಂದಾಗಬೇಕಿತ್ತು' ಎಂದಿದ್ದಾರೆ.
ವಿಶ್ವೇಶ್ವರ ಭಟ್