ಸಂಪಾದಕೀಯ

ಭಾರತಕ್ಕಾಗಿ ಹೋರಾಡಿದವನನ್ನು ನಿರ್ಲಕ್ಷಿಸಿದ ಭಾರತ

ಬ್ರಿಟಿಷ್ ಚಕ್ರಾಧಿಪತ್ಯದಲ್ಲಿದ್ದ ಬೆಂಜಮಿನ್  ಗೈ ಹಾರ್ನಿಮನ್ ಎಂಬ ಆಂಗ್ಲ ವ್ಯಕ್ತಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಥೆ ನಿಜಕ್ಕೂ ರೋಮಾಂಚನವಾದುದು. ಅಲ್ಲದೆ ಭಾರತದ ಪತ್ರಿಕೋದ್ಯಮದಲ್ಲಿ ಐದು ದಶಕಗಳನ್ನು ಕಳೆದು, ಬಾಂಬೇ ಸೆಂಟಿನಲ್, ಸ್ಟೇಟ್ಸ್‌ಮನ್ ಮತ್ತು ಬಾಂಬೆ ಕ್ರಾನಿಕಲ್ ಪತ್ರಿಕೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡಿದ ಹಾರ್ನಿಮನ್ ಪತ್ರಿಕೋದ್ಯಮವನ್ನು ಶಕ್ತಿಯುತವಾಗಿ ಬೆಳೆಸಿದವರು. ಹಲವು ಪತ್ರಿಕೆಗಳ ಸಂಪಾದಕರಾಗಿದ್ದರೂ ಸರಳ ಜೀವಿಯಾಗಿ, ಕೆಲಸಗಾರರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಮ್ಮೆ ಅಮೃತಸರದಲ್ಲಿನ ಕೊಲೆ ಪ್ರಕರಣವನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಗಡಿಪಾರಿನ ಶಿಕ್ಷೆಯನ್ನೂ ಅನುಭವಿಸಿದರು. ಆದರೆ ಭಾರತದ ಮೇಲಿನ ಪ್ರೀತಿಯಿಂದ ಬ್ರಿಟನ್ನಿನಲ್ಲಿಯೂ ಭಾರತದ ಪರವಾಗಿ ಹೋರಾಟ ಮಾಡಿದರು. ನಂತರ ಭಾರತಕ್ಕೆ ಹಿಂದಿರುಗಿ, ಬಾಂಬೆ ಕ್ರಾನಿಕಲ್ ಪತ್ರಿಕೆಯ ಸಂಪಾದಕರಾದರು. ನಿರ್ಭಯವಾಗಿ ಸತ್ಯವನ್ನು ಪ್ರತಿಪಾದಿಸುವಲ್ಲಿ ಆ ಪತ್ರಿಕೆ ಹಿಂದೆಬೀಳಲಿಲ್ಲ. ಹಾರ್ನಿಮನ್ನರು ಕೊನೆಯವರೆಗೂ ಬ್ರಹ್ಮಚರ್ಯವನ್ನು ಪಾಲಿಸಿದರು. ಅವರು ಬ್ರಿಟಿಷರಾದರೂ ಶುದ್ಧ ಸಸ್ಯಾಹಾರಿಯಾಗಿದ್ದರು. ಗಾಂಧೀಜಿ ಕೂಡ ಅವರನ್ನು ಧೀರೋದಾತ್ತ ಬ್ರಿಟಿಷ್ ಪ್ರಜೆ, ಸ್ವಾತಂತ್ರ್ಯದ ಮಂತ್ರೋಪದೇಶಕ, ಅವರ ಸೇವೆಯನ್ನು ಭಾರತೀಯರು ಎಂದೆಂದೂ ಮರೆಯಬಾರದು ಎಂದು ಹೊಗಳಿ ಬರೆದರು. ಅವರಲ್ಲಿದ್ದ ಹಣವನ್ನು ತೊಂದರೆಯೆಂದು ಬಂದ ಕೆಲಸಗಾರರಿಗೆ ಹಿಂದೆ ಮುಂದೆ ನೋಡದೆ ಕೊಟ್ಟುಬಿಡುತ್ತಿದ್ದರು.  ಹೀಗಾಗಿ ಅವರ ಸಂಬಳದ ಬಹುಪಾಲು ಹಣ ಸಹಾಯಕ್ಕಾಗಿ ವಿನಿಯೋಗವಾಗುತ್ತಿತ್ತು. ಅವರ ಐವತ್ತು ವರ್ಷಗಳ ಪತ್ರಿಕೋದ್ಯಮ ಸೇವೆಯ ನೆನಪಿಗಾಗಿ ಬೊಂಬಾಯಿಯ ಜನ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಇಪ್ಪತೈದು ಸಾವಿರ ರೂಪಾಯಿ ನಿಧಿ ಸಮರ್ಪಿಸಿದರು. ನಂತರ ಅವರು ಗಡೀಪಾರಾಗಿ ಇಂಗ್ಲೆಂಡಿಗೆ ತೆರಳುವವರಿದ್ದರು. ಆದರೆ ಅವರಿಂದ ಸಹಾಯ ಪಡೆಯಲು ಒಂದು ದೊಡ್ಡ ಗುಂಪೇ ಕಾದಿತ್ತು. ಅವರ ಅಗತ್ಯಕ್ಕನುಗುಣವಾಗಿ ಯಥೋಚಿತ ಸಹಾಯ ಮಾಡಿ ಹೊರಟುನಿಂತಾಗ ಜೇಬಿನಲ್ಲಿ ಕೇವಲ ಐದುಸಾವಿರ ರುಪಾಯಿಗಳು ಮಾತ್ರ ಉಳಿದಿದ್ದವು. ಇನ್ನೇನು ಹಡಗು ಹತ್ತಿ ಇಂಗ್ಲೆಂಡಿಗೆ ಹೊರಡಬೇಕು, ಅಷ್ಟರಲ್ಲಿ ಅವರ ಸೇವಕನೊಬ್ಬ ಹಡಗಿನ ಬಳಿ ಓಡಿ ಬಂದು, ನೀವು ಹೋದಮೇಲೆ ನನ್ನ ಗತಿಯೇನು ಎಂದು ಗೋಳಾಡಿದ. ಕೂಡಲೇ ಹಾರ್ನಿಮನ್ ಕಿಸೆಗೆ ಕೈಹಾಕಿ ಹಣದ ಥೈಲಿಯನ್ನು ತೆಗೆದು ಅದರಲ್ಲಿದ್ದ ಎಲ್ಲ ಹಣವನ್ನೂ ಎತ್ತಿ ಅವನಿಗೆ ಕೊಟ್ಟು ಹೇಳಿದರು, "ಹೋಗು ಹಾರ್ನಿಮನ್ನನಿಂದ ಕೆಟ್ಟೆನೆಂದು ಈ ಜಗತ್ತಿನಲ್ಲಿ ಯಾರೂ ಹೇಳಬಾರದು!" ಎಂದು. ಸ್ವತಂತ್ರ ಭಾರತಕ್ಕೆ ಮರಳಿ ಬಾಂಬೆ ಸೆಂಟಿನಲ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿ, ವಯಸ್ಸಾದ ಕಾರಣದಿಂದ ನಿವೃತ್ತಿ ಹೊಂದಿದರು. ಕೊನೆಗೆ ಅವರ ಜೀವನ ದುರ್ಭರವಾಗಿ, ಹಸಿವೆ ಮತ್ತು ರೋಗದಿಂದ ನರಳುತ್ತಿದ್ದಾಗ ಅವರನ್ನು ಎಲ್ಲರೂ ನಿರ್ಲಕ್ಷಿಸಿದರು. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿಗೆ ಸಹಾಯ ಮಾಡಲು ಯಾವ ಪತ್ರಿಕಾ ಸಹಚರಿಗಳೂ ಬರಲಿಲ್ಲ. ಹೀಗೆ ನರಳಿ ಮಡಿದ ಹಾರ್ನಿಮನ್ ಸಮಾಧಿಯ ಬಳಿ ಒಂದು ಅಮೃತಶಿಲಾ ಮೂರ್ತಿಯನ್ನು ಸ್ಥಾಪಿಸಲಾಯಿತು. ಅದಕ್ಕೆ ಖರ್ಚುಮಾಡಿದ ಹಣದ ಒಂದಂಶವನ್ನು ಅವರ ಕಡೆಗಾಲದಲ್ಲಿ ಅವರಿಗಾಗಿ ಖರ್ಚುಮಾಡಿದ್ದರೆ, ಸುಖವಾಗಿಯಾದರೂ ಪ್ರಾಣಬಿಡುತ್ತಿದ್ದರೋ ಏನೋ?!


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)