ಲೋಕಸಭಾ ಚುನಾವಣೆ ಮೊದಲ ಹಂತ: 213 ಅಭ್ಯರ್ಥಿಗಳ ವಿರುದ್ಧ ಇವೆ ಕ್ರಿಮಿನಲ್ ಕೇಸ್!
ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ 213 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಂಕಿ-ಅಂಶಗಳಿಂದ ಈ ಮಾಹಿತಿ ಲಭ್ಯವಾಗಿದೆ. ಮೊದಲ ಹಂತದ ಚುನಾವಣೆಗೆ ಒಟ್ಟು 1279 ಅಭ್ಯರ್ಥಿಗಳು ಕಣದಲ್ಲಿದ್ದು, 1266 ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಲಾಗಿದೆ. ಇನ್ನು ಉಳಿದ 13 ಅಭ್ಯರ್ಥಿಗಳ ವಿವರ ಪೂರ್ಣವಾಗಿ ಲಭ್ಯವಾಗಿಲ್ಲ.
ಎಡಿಆರ್ ವರದಿಯ ಪ್ರಕಾರ 1266 ರ ಪೈಕಿ ಶೇ.12 ರಷ್ಟು (213 ಅಭ್ಯರ್ಥಿಗಳ ವಿರುದ್ಧ) ಜನರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಕೊಲೆ, ಮಹಿಳೆಯರ ವಿರುದ್ಧ ಅಪರಾಧ ಎಸಗಿರುವ ಪ್ರಕರಣ, ಅಪಹರಣ ಸೇರಿದಂತೆ ವಿವಿಧ ರೀತಿಯ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಇದರಲ್ಲಿ 10 ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
25 ಅಭ್ಯರ್ಥಿಗಳ ತಮ್ಮ ವಿರುದ್ಧ ಕೊಲೆ ಯತ್ನದ ಆರೋಪ ಇದೆ ಎಂದು ಘೋಷಿಸಿಕೊಂಡಿದ್ದು, 4 ಅಭ್ಯರ್ಥಿಗಳ ವಿರುದ್ಧ ಅಪಹರಣ ಪ್ರಕರಣಗಳು ದಾಖಲಾಗಿವೆ. 16 ಮಂದಿ ವಿರುದ್ಧ ಮಹಿಳೆಯರ ಮೇಲೆ ಅಪರಾಧ ಎಸಗಿದ ಪ್ರಕರಣಗಳಿದ್ದರೆ, 12 ಅಭ್ಯರ್ಥಿಗಳ ವಿರುದ್ಧ ದ್ವೇಷ ಭಾಷಣ ಮಾಡಿರುವ ಆರೋಪವಿದೆ. ಏ.11 ರಂದು 91 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಈ ಪೈಕಿ ಮೂರಕ್ಕಿಂತ ಹೆಚು ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ 37 ಕ್ಷೇತ್ರಗಳನ್ನು ರೆಡ್ ಅಲರ್ಟ್ ಕ್ಷೇತ್ರಗಳೆಂದು ಘೋಷಿಸಲಾಗಿದೆ. ಬಿಜೆಪಿಯ 83 ಅಭ್ಯರ್ಥಿಗಳ ಪೈಕಿ 30 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ, ಕಾಂಗ್ರೆಸ್ ನ 83 ಅಭ್ಯರ್ಥಿಗಳ ಪೈಕಿ 35 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಬಿಎಸ್ ಪಿಯ 32 ಅಭ್ಯರ್ಥಿಗಳ ಪೈಕಿ 8 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಯುಳ್ಳವರಾಗಿದ್ದಾರೆ. ವೈಎಸ್ ಆರ್ ಸಿಪಿಯಿಂದ 25 ರಲ್ಲಿ 13, ಟಿಡಿಪಿಯಿಂದ 25 ರಲ್ಲಿ 4, ಟಿ ಆರ್ ಎಸ್ ನಿಂದ 17 ಅಭ್ಯರ್ಥಿಗಳ ಪೈಕಿ 5 ಜನರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos