ದೇಶ

ಖಾಲಿ ಕುರ್ಚಿಗಳ ಫೋಟೊ ತೆಗೆದ ಪತ್ರಿಕಾ ಛಾಯಗ್ರಾಹಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ, ವಿಡಿಯೋ ವೈರಲ್

Srinivasamurthy VN
ವಿರುಧುನಗರ್‌: ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಹಾಕಲಾಗಿದ್ದ ಖಾಲಿ ಕುರ್ಚಿಗಳ ಪೋಟೋ ತೆಗೆಯುತ್ತಿದ್ದ ಪತ್ರಿಕಾ ಛಾಯಾಗ್ರಾಹಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಶನಿವಾರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದ ವೇಳೆ ಈ ಘಟನೆ ನಡೆದಿದ್ದು, ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಫೋಟೊ ತೆಗೆದ ಅಲ್ಲಿನ ವಾರ ಪತ್ರಿಕೆಯೊಂದರ ಛಾಯಾಗ್ರಾಹಕನ ಮೇಲೆ ಕೈ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. 
ಮೂಲಗಳ ಪ್ರಕಾರ ಈ ಸಮಾವೇಶದ ಅಧ್ಯಕ್ಷತೆಯನ್ನು ತಮಿಳುನಾಡು ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷ ಕೆ.ಎಸ್‌. ಅಳಗಿರಿ ವಹಿಸಿಕೊಂಡಿದ್ದರು. ಈ ಸಮಾವೇಶದಲ್ಲಿ ಖಾಲಿ ಕುರ್ಚಿಗಳಿರುವ ಕಡೆ ಛಾಯಾಗ್ರಾಹಕ ಆರ್‌.ಎಂ ಮುತ್ತುರಾಜ್‌ ಅವರು ಚಿತ್ರ ಸೆರೆ ಹಿಡಿಯುತ್ತಿದ್ದರು. ಆಗ ಕಾಂಗ್ರೆಸ್‌ ಕಾರ್ಯಕರ್ತರು ಆತನ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಮುತ್ತುರಾಜ್‌ ಅವರ ಕ್ಯಾಮೆರಾ ಕಸಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಲ ಪತ್ರಕರ್ತರು ಮಧ್ಯಪ್ರವೇಶ ಮಾಡಿ ಮುತ್ತುರಾಜ್‌ ಅವರಿಗೆ ನೆರವಾಗಿದ್ದಾರೆ. ಘಟನೆ ನಂತರ ಛಾಯಾಗ್ರಾಹಕ ಮುತ್ತುರಾಜ್‌ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬೆಳವಣಿಗೆ ಖಂಡಿಸಿರುವ ಬಿಜೆಪಿ, ‘ಕಾಂಗ್ರೆಸ್‌ನದ್ದು ಗೂಂಡಾ ಸಂಸ್ಕೃತಿ,’ ಎಂದು ಟೀಕಿಸಿದೆ. 
ಇನ್ನು ಈ ದೃಶ್ಯಾವಳಿ ಸದ್ಯ ತಮಿಳುನಾಡಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
SCROLL FOR NEXT