ಗ್ರಾಮೀಣ ಉತ್ತರ ಪ್ರದೇಶದಲ್ಲಿ ಮೋದಿ ಮೇನಿಯಾ: ಮೇ ಭೀ ಚೌಕೀದಾರ್ ಸಿನಿಮಾ/ಸಾಕ್ಷ್ಯಚಿತ್ರಕ್ಕೆ ಮುಗಿಬಿದ್ದ ಜನತೆ!
ಲಖನೌ: ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದ ಮೇ ಭೀ ಚೌಕೀದಾರ್ ಹ್ಹೂ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆತಿತ್ತು. ಈಗ ಮೇ ಭೀ ಚೌಕೀದಾರ್ ಸಾಕ್ಷ್ಯಚಿತ್ರ/ ಸಿನಿಮಾ ವಾಟ್ಸ್ ಆಪ್ ಗಳಲ್ಲಿ ವೈರಲ್ ಆಗತೊಡಗಿದೆ.
ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಮೋದಿ ಮೇನಿಯಾ ಜೋರಾಗಿಯೇ ಇದ್ದು, ವಾಟ್ಸ್ ಆಪ್ ಗಳಲ್ಲಿ ಮೋದಿ ಕುರಿತಾದ ಮೇ ಭೀ ಚೌಕೀದಾರ್ ಚುಟುಕು ಸಿನಿಮಾಗಳು/ ಸಾಕ್ಷ್ಯಚಿತ್ರಗಳು ವೈರಲ್ ಆಗತೊಡಗಿವೆ.
ಮೋದಿ ಸರ್ಕಾರ ಜಾರಿಗೆ ತಂದಿದ್ದ ಉಜ್ವಲಾದಂತಹ ಜನಪ್ರಿಯ ಯೋಜನೆಗಳು, ದೇಶದ ಭದ್ರತೆ ಬಗ್ಗೆ ಮಾಹಿತಿ ನೀಡುವ 5 ನಿಮಿಷಗಳ ಅನೇಕ ಸಾಕ್ಷ್ಯಚಿತ್ರಗಳನ್ನು ತಯಾರಿಸಲಾಗಿದೆ. ಸಾಕ್ಷ್ಯಚಿತ್ರಗಳನ್ನು ಬಿಜೆಪಿಗೆ ಸಂಬಂಧಪಟ್ಟವರಷ್ಟೇ ಅಲ್ಲದೇ ಖಾಸಗಿಯಾಗಿಯೂ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದಾರೆ.
ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಭೋಜ್ಪುರಿ ಭಾಷೆಯಲ್ಲಿ ಚಿತ್ರವನ್ನು ತಯಾರಿಸಿದ್ದಾರೆ. "ತಂತ್ರಜ್ಞಾನ ಆಧುನಿಕವಾಗಿದೆ. ಎಲ್ ಇಡಿ ಪರದೆಗಳಲ್ಲಿ ಸಾಕ್ಷ್ಯಚಿತ್ರಗಳನ್ನು, ವಿಡಿಯೋಗಳನ್ನು ಪ್ರದರ್ಶಿಸುವ ಬದಲು ಈಗ ಮೊಬೈಲ್ ಮೂಲಕವೇ ಅದನ್ನು ಪ್ರಚಾರ ಮಾಡಬಹುದಾಗಿದೆ ಎನ್ನುತ್ತಾರೆ ಚಿತ್ರ ತಯಾರಕರಲ್ಲಿ ಒಬ್ಬರಾದ ಆರ್ ಕೆ ಅಗರ್ವಾಲ್.
ಗುಣಮಟ್ಟ, ಪ್ರೊಡಕ್ಷನ್ ಆಧಾರದಲ್ಲಿ 3 ಲಕ್ಷದಿಂದ 15 ಲಕ್ಷದ ವರೆಗೂ ಸಾಕ್ಷ್ಯಚಿತ್ರಗಳ ತಯಾರಿಕೆಗೆ ಖರ್ಚಾಗಿದೆ ಎಂದು ಅರ್ಗರ್ವಾಲ್ ಮಾಹಿತಿ ನೀಡಿದ್ದಾರೆ.
ಜೌನ್ ಪುರದ ಬಿಜೆಪಿ ಹಾಲಿ ಸಂಸದಸ್ ಕೆಪಿ ಸಿಂಗ್ ಅವರಿಗೆ ಈ ಬಾರಿ ಇನ್ನಷ್ಟೇ ಟಿಕೆಟ್ ಖಾತ್ರಿಯಾಗಬೇಕಿದೆ. ಆದರೆ ಈಗಾಗಲೇ ಭೋಜ್ಪುರಿ ಸಿನಿಮಾಗಳನ್ನು ಬಳಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಮೇ ಭೀ ಚೌಕೀದಾರ್ ಘೋಷ ವಾಕ್ಯ ಉತ್ತರ ಪ್ರದೇಶದ ಗ್ರಾಮ ಗ್ರಾಮಗಳಲ್ಲಿ, ಸ್ಥಳೀಯ ಸಾರಿಗೆಗಳಲ್ಲಿ ಮೊಳಗುತ್ತಿದ್ದು, ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ.