ದೇಶ

ಭಾರತದ ಚುನಾವಣೆ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ: ಇಮ್ರಾನ್ ಖಾನ್ ಗೆ ಅಸಾದುದ್ದೀನ್ ಒವೈಸಿ

Srinivas Rao BV
ಹೈದರಾಬಾದ್: ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಕಾಶ್ಮೀರ ಸಮಸ್ಯೆ ಬಗೆಹರಿಸುವುದಕ್ಕೆ ಉತ್ತಮ ಅವಕಾಶ ಇರಲಿದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ವಿರುದ್ಧ ಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ  ವಾಗ್ದಾಳಿ ನಡೆಸಿದ್ದಾರೆ. 
ಏ.11 ರಿಂದ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, ಆಂಧ್ರಪ್ರದೇಶದಲ್ಲಿ ಮತಚಲಾಯಿಸಿದ ನಂತರ ಮಾತನಾಡಿರುವ ಅಸಾದುದ್ದೀನ್ ಒವೈಸಿ, ಭಾರತದ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾತನಾಡದಿರಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಓವೈಸಿ ಎಚ್ಚರಿಸಿದ್ದಾರೆ. 
ನಾನು ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ಖಂಡಿಸುತ್ತೇನೆ, ಭಾರತದಂತಹ ಶ್ರೇಷ್ಠ ರಾಷ್ಟ್ರದ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಹಕ್ಕು ಇಮ್ರಾನ್ ಖಾನ್ ಗೆ ಇಲ್ಲ. ಭಾರತದಲ್ಲಿ ನ್ಯಾಯ ಹಾಗೂ ಮುಕ್ತ ಚುನಾವಣೆ ನಡೆಯುತ್ತದೆ. ಆದರೆ ಪಾಕಿಸ್ತಾನದ ಚುನಾವಣೆಯನ್ನು ಅಲ್ಲಿನ ಸೇನೆ ಹಾಗೂ ಗುಪ್ತಚರ ಇಲಾಖೆಯ ನಿಯಂತ್ರಣದಲ್ಲಿ ನಡೆಯುತ್ತದೆ. ಇಮ್ರಾನ್ ಖಾನ್ ಅಂತಹ ದೇಶದವರು. ಕಾಶ್ಮೀರ ಸಮಸ್ಯೆ ಬಗೆಹರಿಸುವುದಕ್ಕೆ ಮತ್ತೆ ಮೋದಿ ಪ್ರಧಾನಿಯಾಗಬೇಕೆಂದು ಇಮ್ರಾನ್ ಖಾನ್ ಹೇಳುವುದು ತಪ್ಪು ಕಾಶ್ಮೀರ ಯಾರದ್ದೇ ಖಾಸಗಿ ಸ್ವತ್ತು ಅಲ್ಲ, ಅದು ಭಾರತದ ಅವಿಭಾಜ್ಯ ಅಂಗ ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. 
ಕಾಶ್ಮೀರದಲ್ಲಿ ಮಾಡಬೇಕಿರುವ ಕೆಲಸ ಇನ್ನೂ ಹಲವಿದೆ. ಅದರಲ್ಲಿ ಮೋದಿ ವಿಫಲರಾಗಿದ್ದಾರೆ. ಮೋದಿ ತಮ್ಮನ್ನು ವಿಪಕ್ಷಗಳು ಹಾಗೂ ಪಾಕಿಸ್ತಾನದ ಬಲಿಪಶು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ಇಮ್ರಾನ್ ಖಾನ್ ಅವರೇ ಸ್ವತಃ ಪಾಕಿಸ್ತಾನದ ಐಎಸ್ಐ ಭಾರತದಲ್ಲಿ ಮೋದಿ ಪ್ರಧಾನಿಯಾಗಬೇಕೆಂದು ಎಂದು ಬಯಸುತ್ತಿದೆ. ಇಮ್ರಾನ್ ಖಾನ್ ಬಯಕೆ ಈಡೇರಿಸದಂತೆ ದೇಶದ ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದು ಒವೈಸಿ ಹೇಳಿದ್ದಾರೆ. 
SCROLL FOR NEXT