ದೇಶ

ಹೊಸ ಸರ್ಕಾರ ರಚನೆಯಲ್ಲಿ ಜಗನ್ ಮೋಹನ್ ರೆಡ್ಡಿ ಕಿಂಗ್ ಮೇಕರ್?

Lingaraj Badiger
ನವದೆಹಲಿ: ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಈ ಬಾರಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ತೆರೆಮರೆಗೆ ಸರಿದಿದ್ದ ಪ್ರಾದೇಶಿಕ ಪಕ್ಷಗಳು 2019ರ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಸೆಡ್ಡು ಹೊಡೆಯುತ್ತಿರುವ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಈ ಬಾರಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡಿರುವ ಜಗನ್ ಮೋಹನ್ ರೆಡ್ಡಿ, ಒಂದು ಕಡೆ ಕಾಂಗ್ರೆಸ್ ಅನ್ನು ಕ್ಷಮಿಸಿದ್ದೇನೆ ಎಂದರೆ ಮತ್ತೊಂದು ಕಡೆ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.
2014ರಲ್ಲಿ ವೈಎಸ್ಆರ್ ಕಾಂಗ್ರೆಸ್ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿಲ್ಲ. ಆದರೆ ಮತಗಳಿಕೆಯಲ್ಲಿ ಟಿಡಿಪಿಗಿಂತ ವೈಎಸ್ ಆರ್ ಕಾಂಗ್ರೆಸ್ ಮುಂದಿತ್ತು.
2014ರ ಲೋಕಸಭೆ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದರೆ, ಟಿಡಿಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ವೈಎಸ್ ಆರ್ ಕಾಂಗ್ರೆಸ್ ಶೇ.45.38ರಷ್ಟು ಮತ ಗಳಿಸಿದರೆ, ಟಿಡಿಪಿ ಶೇ.40.53ರಷ್ಟು ಮತ ಗಳಿಸಿತ್ತು. ಇದು ಜಗನ್ ಅವರ ಶಕ್ತಿಯಾಗಿದ್ದು, ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಬಾರಿ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನ ಸೇನಾ ಹಾಗೂ ಬಿಜೆಪಿ ಸಹಾಯದಿಂದ ಟಿಡಿಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಟಿಡಿಪಿ, ಬಿಜೆಪಿ ಜತೆ ಮೈತ್ರಿ ಕಡಿದುಕೊಂಡಿದ್ದು, ಪವನ್ ಕಲ್ಯಾಣ್ ಅವರ ಜನ ಸೇನಾ, ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದರುವುದರಿಂದ ಚಂದ್ರಬಾಬು ನಾಯ್ಡು ಅವರಿಗೆ ಸಂಕಷ್ಟ ಎದುರಾಗಿದೆ.
SCROLL FOR NEXT