ಆಪ್ ಗೆ 4 ಸೀಟು ಬಿಟ್ಟುಕೊಡಲು ಸಿದ್ಧ: ರಾಹುಲ್ ಗಾಂಧಿ; ಡ್ರಾಮಾ ಎಂದ ಕೇಜ್ರಿವಾಲ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಮೈತ್ರಿ ಬಿಕ್ಕಟ್ಟು ಮುಂದುವರೆದಿದ್ದು, ಆಪ್ ಜತೆ ಮೈತ್ರಿಗೆ ಈಗಲೂ ಕಾಂಗ್ರೆಸ್ ಬಾಗಿಲು....
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಮೈತ್ರಿ ಬಿಕ್ಕಟ್ಟು ಮುಂದುವರೆದಿದ್ದು, ಆಪ್ ಜತೆ ಮೈತ್ರಿಗೆ ಈಗಲೂ ಕಾಂಗ್ರೆಸ್ ಬಾಗಿಲು ತೆರೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ನಡುವಿನ ಮೈತ್ರಿಯಿಂದ ಬಿಜೆಪಿ ಸೋಲಿಸಲು ಸಾಧ್ಯವಿದೆ. ಕಾಂಗ್ರೆಸ್ ದೆಹಲಿಯಲ್ಲಿ ಆಪ್‌ಗೆ 4 ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ. ಆದರೆ ಕೇಜ್ರಿವಾಲ್ ಮತ್ತೊಂದು ಯೂಟರ್ನ್ ತೆಗೆದುಕೊಂಡಿದ್ದಾರೆ. ನಮ್ಮ ಬಾಗಿಲು ತೆರೆದಿದೆ. ಆದರೆ ಸಮಯ ಓಡುತ್ತಿದೆ ಎಂದು ಹೇಳಿದ್ದಾರೆ.
ಇನ್ನು ರಾಹುಲ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಅಧ್ಯಕ್ಷರಿಗೆ ಕೇವಲ ಪ್ರಚಾರದ ಆಸಕ್ತಿ ಇದೆ. ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿಜವಾದ ಆಸಕ್ತಿ ಇಲ್ಲ. ಹೀಗಾಗಿ ಅನಗತ್ಯವಾಗಿ ನಮ್ಮನ್ನು ದೂರುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಯಾವ ಯೂ-ಟರ್ನ್ ಬಗ್ಗೆ ನೀವು ಮಾತನಾಡುತ್ತಿದ್ದೀರಿ? ಮೈತ್ರಿ ಮಾತುಕತೆ ಇನ್ನೂ ನಡೆಯುತ್ತಿದೆ. ನಿಮ್ಮ ಟ್ವೀಟ್ ನೋಡಿದರೆ, ನೀವು ಕೇವಲ ಪೋಸ್ ಕೊಡುತ್ತಿದ್ದೀರಿ, ಮೈತ್ರಿ ಬಗ್ಗೆ ಆಸಕ್ತಿ ಇಲ್ಲ ಅಂತ ತೋರಿಸುತ್ತದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಮೋದಿ ವಿರೋಧಿ ಮತಗಳನ್ನು ವಿಭಜಿಸುತ್ತಿದೆ ಎಂದು ಆರೋಪಿಸಿರುವ ದೆಹಲಿ ಸಿಎಂ, ನೀವು ಹೇಳಿಕೆಗಳನ್ನು ಕೊಡುವುದರಲ್ಲಿ ತೊಡಗಿಸಿಕೊಂಡಿದ್ದೀರಿ. ಕ್ಷಮೆ ಇರಲಿ. ಇಂದು ನರೇಂದ್ರ ಮೋದಿ-ಅಮಿತ್ ಶಾ ಅವರಿಂದ ದೇಶವನ್ನು ರಕ್ಷಿಸಬೇಕಿದೆ. ನೀವು ಮತಗಳನ್ನು ವಿಭಜಿಸುವ ಮೂಲಕ ಮೋದಿಗೆ ಸಹಾಯ ಮಾಡುತ್ತಿದ್ದೀರಿ ಎಂದಿದ್ದಾರೆ.
ಆಪ್ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಪಂಜಾಬ್, ಹರಿಯಾಣ, ದೆಹಲಿ ಮತ್ತು ಚಂಡೀಗಢದಲ್ಲಿ 31 ಕ್ಷೇತ್ರಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮೋದಿ ಅಧಿಕಾರಕ್ಕೆ ಬರದಂತೆ ನೀವು ತಡೆಯಬಹುದು. ಆದರೆ ಕಾಂಗ್ರೆಸ್ ಏಕೆ ಮೋದಿ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಉಳಿಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.