ಡಿಂಪಲ್ ಯಾದವ್ - ಪೂನಂ ಸಿನ್ಹಾ
ಲಖನೌ: ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬಾಲಿವುಡ್ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಅವರು ಮಂಗಳವಾರ ಸಮಾಜವಾದಿ ಪಕ್ಷ(ಎಸ್ಪಿ) ಸೇರ್ಪಡೆಯಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ವಿರುದ್ಧ ಕಣ್ಣಕ್ಕಿಳಿಯುವ ಸಾಧ್ಯತೆ ಇದೆ.
ಪೂನಂ ಅವರು ಇಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರನ್ನು ಭೇಟಿ ಮಾಡಿ, ಸಮಾಜವಾದಿ ಪಕ್ಷ ಸೇರಿದ್ದಾರೆ.
ಮೂಲಗಳ ಪ್ರಕಾರ, ಪೂನಂ ಅವರು ಉತ್ತರ ಪ್ರದೇಶದ ಲಖನೌ ಲೋಕಸಭಾ ಕ್ಷೇತ್ರದಿಂದ ಎಸ್ಪಿ, ಬಿಎಸ್ಪಿ ಹಾಗೂ ಆರ್ ಎಲ್ ಡಿ ಮೈತ್ರಿ ಅಭ್ಯರ್ಥಿಯಾಗಿ ರಾಜನಾಥ ಸಿಂಗ್ ಅವರ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ. ಅಲ್ಲದೆ ಪೂನಂ ಅವರಿಗೆ ಕಾಂಗ್ರೆಸ್ ಸಹ ಬೆಂಬಲ ನೀಡುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಮತ್ತು ಆರ್ಎಲ್ಡಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಸಮಾಜವಾದಿ ಪಕ್ಷಕ್ಕೆ ಲಖನೌ ಕ್ಷೇತ್ರ ಸಿಕ್ಕಿದೆ. ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರದಿಂದ ರಾಜನಾಥ ಸಿಂಗ್ ಸ್ಪರ್ಧೆ ಮಾಡುತ್ತಿರುವ ಕಾರಣಕ್ಕೆ ಇವರಿಗೆ ಪ್ರಬಲ ಸ್ಪರ್ಧೆ ಒಡ್ಡಲು ಮೈತ್ರಿಯಿಂದ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದಕ್ಕೂ ಮುನ್ನ ಶತ್ರುಘ್ನ ಸಿನ್ಹಾ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ತಮ್ಮ ಪತ್ನಿಯನ್ನು ಅಭ್ಯರ್ಥಿಯನ್ನಾಗಿಸುವ ಬಗ್ಗೆ ಚರ್ಚೆ ನಡೆಸಿದ್ದರು. ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಗೆದ್ದು ಸಂಸದನಾಗಿರುವ ಶತ್ರುಘ್ನ ಸಿನ್ಹಾ ಇತ್ತೀಚೆಗೆ ಬಿಜೆಪಿ ತೊರೆದು, ಈಗ ಅದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
ಲಖನೌದಲ್ಲಿ 4 ಲಕ್ಷ ಕಾಯಸ್ಥ ಮತಗಳು, 1.3 ಲಕ್ಷ ಸಿಂಧಿ ಮತದಾರರು ಹಾಗೂ 3.5 ಲಕ್ಷ ಮುಸ್ಲಿಂ ಮತಗಳು ಇವೆ. ಪೂನಂ ಸಿನ್ಹಾ ಅವರು ಸಿಂಧಿ ಸಮುದಾಯಕ್ಕೆ ಸೇರಿದರೆ ಅವರ ಪತಿ ಶತ್ರುಘ್ನ ಸಿನ್ಹಾ ಕಾಯಸ್ಥ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಎರಡು ಸಮುದಾಯದ ಮತದಾರರು ಕೈ ಹಿಡಿಯಲಿದ್ದಾರೆ ಎಂಬ ಲೆಕ್ಕಾಚಾರ ಮೈತ್ರಿ ಪಕ್ಷಗಳ ನಾಯಕರದ್ದಾಗಿದೆ.