ಪಾಕ್ ಪ್ರಧಾನಿ ಹೇಳಿಕೆ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ ಎಂದ ಪ್ರಧಾನಿ ಮೋದಿ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರ ವಿವಾದ ಹಾಗೂ ಭಾರತ - ಪಾಕ್ ಶಾಂತಿ ಮಾತುಕತೆಗೆ ಉತ್ತಮ ಅವಕಾಶವಿದೆ ಎಂದಿದ್ದ ಪಾಕಿಸ್ತಾನ...
ನವದೆಹಲಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರ ವಿವಾದ ಹಾಗೂ ಭಾರತ - ಪಾಕ್ ಶಾಂತಿ ಮಾತುಕತೆಗೆ ಉತ್ತಮ ಅವಕಾಶವಿದೆ ಎಂದಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಕ್ರಿಕೆಟಿಗ, ಪಾಕ್ ಪ್ರಧಾನಿ ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಉಲ್ಟಾ ಹೇಳಿದ್ದಾರೆ ಎಂದರು.
ಪಾಕಿಸ್ತಾನ ಚುನಾವಣೆ ವೇಳೆ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದ ಇಮ್ರಾನ್ ಖಾನ್ ಒಬ್ಬ ಕ್ರಿಕೆಟಿಗ ಎಂಬುದನ್ನು ನಾವು ಮರೆಯಬಾರದು. ಚುನಾವಣಾ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅವರು ಉಲ್ಟಾ ಹೇಳಿಕೆ ನೀಡಿದ್ದಾರೆ. ಆದರೆ ಆ ಉಲ್ಟಾ ಹೇಳಿಕೆಗೆ 'ಹೆಲಿಕಾಪ್ಟರ್ ಶಾಟ್' ಹೊಡೆಯುವುದು ಹೇಗೆ ಅಂತ ಭಾರತೀಯರಿಗೆ ಗೊತ್ತು ಎಂದು ಪ್ರಧಾನಿ ಹೇಳಿದ್ದಾರೆ.
ಪಾಕಿಸ್ತಾನ ಚುನಾವಣೆ ವೇಳೆ ಇಮ್ರಾನ್ ಖಾನ್ ಮೋದಿ ಹೆಸರನ್ನು ಹೇಗೆ ಬಳಸಿಕೊಂಡಿದ್ದರು ಎಂಬುದುನ್ನು ನಾವು ನೆನಪಿಸಿಕೊಳ್ಳಬೇಕು. ಮೋದಿ ಕಾ ಜೊ ಯಾರ್ ಹೇ, ವೋ ಗದ್ಧಾರ್ ಹೇ (ಮೋದಿಯ ಗೆಳೆಯರಿದ್ದಾರಲ್ಲ, ಅವರು ಮೋಸಗಾರರು) ಎಂದು ಪಾಕ್ ಪ್ರಧಾನಿ ಹೇಳಿಕೆಯನ್ನು ಮೋದಿ ಉಲ್ಲೇಖಿಸಿದರು.
ಇಮ್ರಾನ್ ಖಾನ್ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್, ಬಿಜೆಪಿ ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿತ್ತು.