ದೇಶ

ಪ್ರಗ್ಯಾ ಸಿಂಗ್ ಸ್ಪರ್ಧೆಗೆ ಅಮಿತ್ ಶಾ ಸಮರ್ಥನೆ, ನಿಜವಾದ ಅಪರಾಧಿಗಳು ಬೇರೆ ಎಂದ ಬಿಜೆಪಿ ಅಧ್ಯಕ್ಷ

Lingaraj Badiger
ಕೊಲ್ಕತಾ: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಮಧ್ಯ ಪ್ರದೇಶ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ ಪಕ್ಷದ ನಿರ್ಧಾರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದು, ನಿಜವಾದ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.
ಇಂದು ಕೊಲ್ಕತಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸಾಧ್ವಿ ಪ್ರಗ್ಯಾ ಸಿಂಗ್ ಸ್ಪರ್ಧೆ ಸಂಪೂರ್ಣ ಸರಿಯಾದ ನಿರ್ಧಾರ. ಅವರ ವಿರುದ್ಧದ ಮಾಡಲಾದ ಆರೋಪಗಳೆಲ್ಲವೂ ಸುಳ್ಳಾಗಿದ್ದು, ಮಾಲೆಗಾಂವ್ ಸ್ಫೋಟದ ನಿಜವಾದ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದರು.
2008ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರನ್ನು ಬಿಜೆಪಿ ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. 
'ಇದು ಸಂಪೂರ್ಣ ಸರಿಯಾದ ನಿರ್ಧಾರ. ಅವರ ವಿರುದ್ಧದ ಆರೋಪಗಳು ನಿರಾಧಾರ. ಸಾಧ್ವಿ ಅಥವಾ ಸ್ವಾಮಿ ಅಸೀಮಾನಂದರ ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ' ಎಂದು ಅಮಿತ್ ಶಾ ಹೇಳಿದ್ದಾರೆ.
ನಿಜವಾದ ಅಪರಾಧಿಗಳನ್ನು ಬಂಧಿಸಿದ ಕೂಡಲೇ ಬಿಟ್ಟು ಕಳುಹಿಸಲಾಗಿದೆ. ಅವರನ್ನು ಯಾಕಾಗಿ ಬಿಡುಗಡೆ ಮಾಡಲಾಯಿತು ಎಂಬುದೇ ಪ್ರಶ್ನೆಯಾಗಿದೆ ಎಂದರು.
ಇದೇ ವೇಳೆ ವಿವಾದಾತ್ಮಕ ಎನ್‌ಆರ್‌ಸಿ ಮತ್ತು ಪೌರತ್ವ (ತಿದ್ದುಪಡಿ) ವಿಧೇಯಕ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷರು, ವಲಸಿಗರು ಆತಂಕ ಪಡಬೇಕಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೊದಲು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯುತ್ತದೆ. ನಂತರ ಅಕ್ರಮ ವಲಸಿಗರನ್ನು ಹೊರಹಾಕಲು ಅದನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತದೆ ಎಂದು ವಿವರಿಸಿದರು. 
'ವಲಸಿಗರಿಗೆ ಪೌರತ್ವ ನೀಡಲಾಗುತ್ತದೆ. ಅವರು ಈ ದೇಶದಲ್ಲೇ ಪೂರ್ಣ ಘನತೆ-ಗೌರವದೊಂದಿಗೆ ಬದುಕಬಹುದಾಗಿದೆ. ಮಮತಾ ಬ್ಯಾನರ್ಜಿ ನೀಡುವ ದಾರಿ ತಪ್ಪಿಸುವ ಹೇಳಿಕೆಗಳಿಗೆ ಕಿವಿಗೊಡಬೇಕಿಲ್ಲ' ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.
SCROLL FOR NEXT