ಸೇನಾ ಪಡೆಯ ನಿವೃತ್ತ ಅಧಿಕಾರಿಗಳು ಬಿಜೆಪಿಗೆ ಸೇರ್ಪಡೆ
ಸೇನಾ ಪಡೆಯ ಏಳು ನಿವೃತ್ತ ಹಿರಿಯ ಅಧಿಕಾರಿಗಳು ಮತ್ತು ಯೋಧರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇನಾ ಸಿಬ್ಬಂದಿಯನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ನವದೆಹಲಿ: ಸೇನಾ ಪಡೆಯ ಏಳು ನಿವೃತ್ತ ಹಿರಿಯ ಅಧಿಕಾರಿಗಳು ಮತ್ತು ಯೋಧರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇನಾ ಸಿಬ್ಬಂದಿಯನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಲೆಫ್ಟಿನೆಂಟ್ ಜನರಲ್ ಜೆಬಿಎಸ್ ಯಾದವ್, ಲೆಫ್ಟಿನೆಂಟ್ ಜನರಲ್ ಆರ್ ಎನ್ ಸಿಂಗ್, ಲೆಫ್ಟಿನೆಂಟ್ ಜನರಲ್ ಎಸ್ ಕೆ ಪಟ್ಯಾಲ್, ಲೆಫ್ಟಿನೆಂಟ್ ಜನರಲ್ ಸುನಿತ್ ಕುಮಾರ್, ಲೆಫ್ಟಿನೆಂಟ್ ಜನರಲ್ ನಿತಿನ್ ಕೊಹ್ಲಿ, ಕರ್ನಲ್ ಆರ್ ಕೆ ತ್ರಿಪಾಠಿ, ವಿಂಗ್ ಕಮಾಂಡರ್ ನವೀತ್ ಮಾಗನ್ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತೀಯ ಸೇನಾ ಪಡೆಯಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿ ಬಿಜೆಪಿ ಸೇರಿರುವುದರಿಂದ ಪಕ್ಷದ ಘನತೆ, ಗೌರವ ಮತ್ತಷ್ಟು ಹೆಚ್ಚಾಗಲಿದೆ. ಪಕ್ಷಕ್ಕೆ ಇದು ಮತ್ತಷ್ಟು ಶಕ್ತಿಯನ್ನು ತುಂಬಲಿದೆ ಎಂದರು.
ಸೇನಾ ಪಡೆಯ ನಿವೃತ್ತ ಅಧಿಕಾರಿಗಳು ರಾಷ್ಟ್ರಸೇವೆಯ ಜೊತೆಗೆ ಅಧ್ಯಯನಶೀಲರಾಗಿ ಸಮಾಜದ ಆಗುಹೋಗುಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವುದು ಪಕ್ಷವನ್ನು ಕಟ್ಟಲು, ಬೆಳೆಸಲು ಸಹಕಾರಿಯಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.