ದೇಶ

ನೈಲ್ ಪಾಲಿಶ್ ನಿಂದ ವೋಟಿಂಗ್ ಇಂಕ್ ಮಾಯ?: ಸುದ್ದಿಗೆ ಗ್ರಾಸವಾಯ್ತು 'ಕೈ' ಮುಖಂಡ ಸಂಜಯ್ ಝಾ ಟ್ವೀಟ್

Srinivasamurthy VN
ನವದೆಹಲಿ: ಇಡೀ ದೇಶ 4ನೇ ಹಂತದ ಮತದಾನದ ಕುರಿತು ಗಮನ ಹರಿಸಿದ್ದರೆ, ಇದರ ನಡುವೆಯೇ ಮತದಾರರಿಗೆ ಚುನಾವಣಾ ಆಯೋಗ ಹಾಕುತ್ತಿರುವ ಶಾಹಿ (ಕೈ ಬೆರಳಿಗೆ ಹಾಕುವ ಇಂಕ್)ನ ಗುಣಮಟ್ಟದ ಕುರಿತು ಮತ್ತೆ ವಿವಾದ ಭುಗಿಲೆದ್ದಿದೆ.
ಹೌದು.. ಇಂತಹುದೊಂದು ಚರ್ಚೆಗೆ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ವೇದಿಕೆ ಕಲ್ಪಿಸಿಕೊಟ್ಟಿದ್ದು, ಇಂದು ಮತದಾನ ಮಾಡಿದ ಬಳಿಕ ತಮ್ಮ ಕೈ ಬೆರಳಿಗೆ ಹಾಕಿದ್ದ 'ಅಳಿಸಲಾಗದ  ಇಂಕ್' ಅನ್ನು ತಾವು ನೈಲ್ ಪಾಲಿಶ್ ಬಳಸಿ ಅಳಿಸಿ ಹಾಕಿದ್ದೇನೆ ಎಂದು ಸಂಜಯ್ ಝಾ ಟ್ವೀಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಕೈ ಬೆರಳಿನಲ್ಲಿದ್ದ ಇಂಕ್ ಅಳಿಸಿದ್ದಕ್ಕೆ ಫೋಟೋ ಕೂಡ ಅಪ್ಲೋಡ್ ಮಾಡಿದ್ದಾರೆ.
ಅಲ್ಲದೆ ಚುನಾವಣಾ ಶಾಹಿಯಲ್ಲಿ ಅಕ್ರಮ ವಾಸನೆ ಹರಿದಾಡುತ್ತಿದ್ದು, ಅಕ್ರಮ ಮತದಾನದ ಆತಂಕ ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಕೇಂದ್ರ ಚುನಾವಣಾ ಆಯೋಗ ಬಳಕೆ ಮಾಡುತ್ತಿರುವ ಶಾಹಿ ಕರ್ನಾಟಕದ ಮೈಸೂರಿನಲ್ಲಿ ತಯಾರಾಗುತ್ತಿದ್ದು, ದಶಕಗಳಿಂದಲೂ ಚುನಾವಣಾ ಆಯೋಗ ಇದೇ ಇಂಕ್ ಅನ್ನು ಬಳಕೆ ಮಾಡುತ್ತಿದೆ. 1951ರಿಂದಲೂ ಆಯೋಗ ಇದೇ ಇಂಕ್ ಅನ್ನು ಬಳಕೆ ಮಾಡುತ್ತಿದ್ದು, ಹಾಲಿ ಲೋಕಸಭಾ ಚುನಾವಣೆಗಾಗಿ ಚುನಾವಣಾ ಆಯೋಗ ಸುಮಾರು 33 ಕೋಟಿ ರೂ ವೆಚ್ಚದಲ್ಲಿ 26 ಲಕ್ಷ ಬಾಟಲ್ ಇಂಕ್ ಗಳನ್ನು ತರಿಸಿಕೊಂಡಿದೆ.
SCROLL FOR NEXT